ಹಿರಿಯಡ್ಕ: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಂದ ಕರ್ನಾಟಕದಲ್ಲಿ ರಾಜಕೀಯ ಪ್ರವಾಸ ನಡೆಯುತ್ತಿದೆ. ಕೊರೊನಾ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಾಗ ಮತ್ತು ನೆರೆಯಿಂದ ಆಸ್ತಿಪಾಸ್ತಿ ನಷ್ಟ ಅನುಭವಿಸಿದಾಗ ಈ ನಾಯಕರು ರಾಜ್ಯಕ್ಕೆ ಭೇಟಿ ನೀಡಿಲ್ಲ.
ಚುನಾವಣೆ ಸಮೀಪಿಸುತ್ತಿದ್ದಂತೆ ಕರ್ನಾಟಕದಲ್ಲಿ ಪದೇಪದೇ ಪ್ರವಾಸ ಮಾಡುತ್ತಿರುವುದು ಹಾಸ್ಯಾಸ್ಪದ. ಆ ಮೂಲಕ ರಾಜ್ಯದಲ್ಲಿ ರಾಜಕೀಯ ಪ್ರವಾಸೋದ್ಯಮ ಶುರು ಮಾಡಿದ್ದಾರೆ ಎಂದು ರಾಜ್ಯ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಲೇವಡಿ ಮಾಡಿದ್ದಾರೆ.
ಕರಾವಳಿ ಪ್ರಜಾಧ್ವನಿ ಯಾತ್ರೆಯ ಪ್ರಯುಕ್ತ ಹಿರಿಯಡಕದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಅವರು ಮಾತನಾಡಿದರು. ಬಂಡವಾಳ ಶಾಹಿಗಳಿಗೆ 10ಲಕ್ಷ ಕೋಟಿ ರೂ. ಸಾಲಮನ್ನಾ ಮಾಡಲಾಗಿದೆ. ಆದರೆ ರೈತರ ಸಾಲ ಮನ್ನಾ ಮಾಡಲು ಇವರು ಹಿಂದೇಟು ಹಾಕುತ್ತಿದ್ದಾರೆ. ಇದು ಕೇವಲ ಶ್ರೀಮಂತರ ಸರಕಾರ. ಇವರ ಹಿಂಬಾಲಕರಿಗೆ ಮಾತ್ರ ಬಂಡವಾಳ ಹೂಡಿಕೆಗೆ ನೆರವಾಗುತ್ತಿದ್ದಾರೆ ಎಂದು ಆರೋಪಿಸಿದರು.
ಸರಕಾರ ಜನಸಾಮಾನ್ಯರ ಕಲ್ಯಾಣಕ್ಕಾಗಿ ವೆಚ್ಚ ಮಾಡುತ್ತಿಲ್ಲ. ಅವರ ಖಾಸಗಿ ಸ್ನೇಹಿತರಿಗೆ ಬಂಡವಾಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.