ಕುಂದಾಪುರ: ಕಾಡಿನಿಂದ ಆಹಾರವನ್ನು ಹುಡುಕಿಕೊಂಡು ಬಂದಿರುವ ಚಿರತೆಗಳು ಕಾಡಂಚಿನ ಪ್ರದೇಶವಾದ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿ ಭೂ ಪ್ರದೇಶದಲ್ಲಿ ಕಳೆದ ಮೂರು ತಿಂಗಳಿನಿಂದ ವಾಸ್ತವ್ಯವನ್ನು ಹೂಡಿವೆ ಸ್ವಚ್ಛಂದವಾಗಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ತಿರುಗಾಡಿ ಕೊಂಡಿರುವ ಚಿರತೆಗಳ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚುವುದೆ ಅರಣ್ಯ ಇಲಾಖೆಗೆಗೆ ದೊಡ್ಡ ತಲೆನೋವು ಆಗಿದೆ. ಬೋನ್ ಅಳವಡಿಕೆ ಮಾಡಿದ್ದರು ಚಿರತೆಯನ್ನು ಸೆರೆ ಹಿಡಿಯಲು ಸಾಧ್ಯವಾಗಲಿಲ್ಲ.
ಜನವಸತಿ ಪ್ರದೇಶಗಳತ್ತಾ ಆಹಾರವನ್ನು ಹುಡುಕಿಕೊಂಡು ಬರುರುತ್ತಿರುವ ಚಿರತೆಗಳು ದನದ ಕೊಟ್ಟಿಗೆಗೆ ನುಗ್ಗಿ ದನ ಕರುಗಳನ್ನು ಬೇಟೆ ಯಾಡುತ್ತಿವೆ,ಮನೆ ಬಾಗಿಲಿನಲ್ಲಿ ಕಟ್ಟಿರುವ ನಾಯಿಗಳನ್ನು ಕಾಡಿಗೆ ಹೊತ್ತುಕೊಂಡು ಹೋಗುತ್ತಿದ್ದು 15 ಕ್ಕೂ ಹೆಚ್ಚಿನ ದನಕರುಗಳು ಹಾಗೂ ಅನೇಕ ಸಾಕು ನಾಯಿಗಳನ್ನು ಬಲಿತೆಗೆದುಕೊಂಡಿವೆ.
ಗ್ರಾಮೀಣ ಪ್ರದೇಶದ ಜನರ ನೆಮ್ಮದಿ ಬದುಕುನ್ನು ಹಾಳು ಮಾಡುತ್ತಿರುವ ಅಪಾಯಕಾರಿ ಚಿರತೆಗಳನ್ನು ಸೆರೆ ಹಿಡಿಯಲು ಕೂಬಿಂಗ್ ಮಾದರಿಯ ಕಾರ್ಯಚರಣೆಯನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ,ಕೋಣ್ಕಿ ಬಡಾಕೆರೆ, ಪಡುಕೋಣೆ, ಆಚಾರಬೆಟ್ಟು, ಹೆಮ್ಮುಂಜೆ, ತೆಂಕಬೈಲು ಮಾಡ್ಬಿನ್ ಹಿತ್ಲು, ಗುಬ್ಯಾಡಿ, ಸೇಡ್‍ಕುಳಿ, ಜಡ್ಡಾಡಿ ಪ್ರದೇಶದಲ್ಲಿ ಕಳೆದ ಮೂರು ತಿಂಗಳುಗಳಿಂದ ಚಿರತೆಗಳು ದನಕರುಗಳನ್ನು ಬೇಟೆಯಾಡುತ್ತಿವೆ.ಕುಂದಾಪುರ ತಾಲೂಕಿನ ಹರ್ಕೂರು,ಆಲೂರು,ಹಕ್ಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳೂರು,ಕುಂದಬಾರಂದಾಡಿ,ನೂಜಾಡಿ,ತೊರೊಳ್ಳಿ ಭಾಗದಲ್ಲಿಯೂ ಚಿರತೆಗಳು ಸಂಚಾರ ಮಾಡುತ್ತಿದ್ದು ಜನರು ಭಯಭೀತರಾಗಿದ್ದಾರೆ.
ಹಾಡು ಹಗಲಲ್ಲೇ ಕಣ್ಣೆದುರೆ ಪ್ರತ್ಯಕ್ಷವಾಗುತ್ತಿರುವ ಚಿರತೆಗಳನ್ನು ಕಂಡು ಗ್ರಾಮಸ್ಥರು ಹೆದರಿ ಹೋಗಿದ್ದಾರೆ.
ನಾಡ ಹೆಮ್ಮುಂಜೆಯಲ್ಲಿ ಜಾನುವಾರುಗಳು ಬಲಿ: ಕಾಡಿಗೆ ಹೊಂದಿಕೊಂಡಿರುವ ನಾಡ ಹೆಮ್ಮುಂಜೆಯಲ್ಲಿ ಈ ವಾರದಲ್ಲಿ 4 ದಿನದ ಅಂತರದಲ್ಲಿ 3 ದನಕರುಗಳನ್ನು ಚಿರತೆ ಬಲಿ ತೆಗೆದುಕೊಂಡಿವೆ 2 ಕ್ಕೂ ಅಧಿಕ ನಾಯಿಗಳನ್ನು ಹೊತ್ತುಕೊಂಡು ಹೋಗಿವೆ, ಹೆಮ್ಮುಂಜೆ ಭಾರತಿ ದೇವಾಡಿಗ ಮತ್ತು ಗುಬ್ಯಾಡಿ ಶೇಖರ್ ಶೆಟ್ಟಿ ಅವರ ಮನೆಯ ದನಕರುಗಳು ಚಿರತೆ ಬಲಿ ಪಡೆದಿದೆ. ಈ ಹಿಂದೆ ಈ ಪರಿಸರದಲ್ಲಿ 4 ದನಗಳು ಕಣ್ಮರೆ ಆಗಿದ್ದವು,ತೆಂಕಬೈಲು ಗುಬ್ಯಾಡಿ ಹಾಡಿಯಲ್ಲಿ ಸತ್ತ ದನದ ಅಸ್ಥಿಪಂಜರ ಕೂಡ ಪತ್ತೆ ಆಗಿದೆ.ಡಿಸೆಂಬರ್ ತಿಂಗಳಿನಲ್ಲಿ ಬಡಾಕೆರೆ,ವಕ್ಕೇರಿ ಆಸುಪಾಸಿನ ಪರಿಸರದಲ್ಲಿ 3 ದನಕರುಗಳು ಚಿರತೆ ಹೊಟ್ಟೆ ಸೇರಿದೆ,ಪಡುಕೋಣೆ ಚುಂಗಿ ಗುಡ್ಡೆಯಲ್ಲಿ ನಾಯಿಯನ್ನು ಬಲಿ ತೆಗೆದುಕೊಂಡಿದೆ.ಸದ್ಯದ ಪರಿಸ್ಥಿತಿಯಲ್ಲಿ ದನಕರುಗಳು,ನಾಯಿಗಳನ್ನು ಬೇಟೆಯಾಡುತ್ತಿರುವ ಚಿರತೆಗಳು ಮಾನವರ ಮೇಲೂ ದಾಳಿ ಮಾಡುವ ಸಾಧ್ಯತೆಗಳಿವೆ.
ಹಾಡು ಹಗಲಿನಲ್ಲೆ ಚಿರತೆ ಸಂಚಾರ: ಫೆ.22 ರ ಬುಧವಾರ ಮಧ್ಯಾಹ್ನ 1.30 ರಿಂದ 2 ಗಂಟೆ ಸುಮಾರಿಗೆ ವೆಂಕಪ್ಪಯ್ಯ ಆಚಾರ್ಯ ಎನ್ನುವವರು ಹೆಮ್ಮುಂಜೆಯಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಚಿರತೆ ರಸ್ತೆಯಲ್ಲಿ ಹಾದು ಹೋಗಿರುವ ದೃಶ್ಯವನ್ನು ಕಂಡು ಹೌಹಾರಿ ಹೋಗಿದ್ದಾರೆ,ರಾತ್ರಿ ಸಮಯದಲ್ಲಿ ಓಡಾಟ ಮಾಡುತ್ತಿರುವ ಚಿರತೆಗಳು ಹಗಲಿನ ಸಮಯದಲ್ಲಿಯೂ ಓಡಾಡುತ್ತಿವೆ.
ಕಾಡಂಚಿನ ಪ್ರದೇಶದಿಂದ ದೂರವಿರುವ ಪಡುಕೋಣೆ ಗ್ರೆಗರಿ ಶಾಲೆಯ ಬಳಿ ಹಾದುಹೋಗಿರುವ ಮುಖ್ಯ ರಸ್ತೆಯಲ್ಲಿ ಬುಧವಾರದಂದು ರಾತ್ರಿ 8.30 ರ ಸುಮಾರಿಗೆ ಬೈಕ್ ಸವಾರರ ಎದುರು ಚಿರತೆ ಕಾಣಿಸಿಕೊಂಡಿದೆ ಪ್ರತ್ಯಕ್ಷದರ್ಶಿಗಳು ತಮ್ಮ ಮೊಬೈಲ್ ಕ್ಯಾಮಾರದಲ್ಲಿ ಚಿರತೆ ಫೋಟೋ ಕ್ಲಿಕಿಸಿಕೊಂಡಿದ್ದಾರೆ.
ಗುಡ್ಡಿಹೋಟೆಲ್‍ನಲ್ಲಿ ಕಳೆದ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಶಂಕರ ಎನ್ನುವ ವ್ಯಕ್ತಿಯ ಮನೆ ಮುಂದೆ ಚಿರತೆ ನಿರ್ಭಯದಿಂದ ಸಂಚಾರ ಮಾಡಿಕೊಂಡು ಹೋಗಿದೆ.ಜನ ವಸತಿ ಪ್ರದೇಶಗಳಲ್ಲಿ ಸಂಚಾರ ಮಾಡುತ್ತಿರುವ ಚಿರತೆಗಳನ್ನು ಕಂಡು ಜನರು ಜೀವ ಭಯದಿಂದ ಕಾಲ ಕಳೆಯುವಂತೆ ಆಗಿದೆ.
ನದಿಯನ್ನು ದಾಟಿ ಕುರುದ್ವೀಪ ಪ್ರವೇಶ: ಫೆ.20 ಸೋಮವಾರದಂದು ಸಂಜೆ 5 ಗಂಟೆ ಸುಮಾರಿಗೆ ಪಡುಕೋಣೆ ಕೋಟೆಮನೆ ಕಡಿನಬಾಗಿಲು ಕಡೆಯಿಂದ 2 ಚಿರತೆಗಳು ಸೌಪರ್ಣಿಕಾ ನದಿಯಲ್ಲಿ ಈಜಿಕೊಂಡು ನದಿ ದಾಟಿ ಕುರುದ್ವೀಪ ಪ್ರವೇಶ ಮಾಡಿವೆ.ನದಿಯಲ್ಲಿ ಈಜಿ ಕೊಂಡು ದಡಕ್ಕೆ ಬರುತ್ತಿರುವ ಚಿರತೆಗಳನ್ನು ಪ್ರತ್ಯಕ್ಷದರ್ಶಿಗಳಿಬ್ಬರು ನೋಡಿ ಗ್ರಾಮಸ್ಥರಿಗೆ ಮಾಹಿತಿಯನ್ನು ರವಾನಿಸಿದ್ದಾರೆ. ಸ್ಥಳೀಯರ ದೂರಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ ಚಿರತೆಯ ಹೆಜ್ಜೆಗುರುತುಗಳನ್ನು ಪತ್ತೆ ಹಚ್ಚಿದಾರೆ.
ಪಡುಕೋಣೆ ಕೋಟೆಮನೆ ಕಡಿನಬಾಗಿಲುನಿಂದ ಸೌಪರ್ಣಿಕಾ ನದಿ ನೀರಿನಲ್ಲಿ ಸುಮಾರು 200 ಮೀಟರ್ ಈಜಿಕೊಂಡು 2 ಚಿರತೆಗಳು ಹಾಡು ಹಗಲಿನಲ್ಲೇ ಕುರುದ್ವೀಪ ದ್ವೀಪ ಪ್ರವೇಶವನ್ನು ಮಾಡಿದ್ದವು.ರಾತ್ರಿ ಸಮಯದಲ್ಲಿ ಪಟಾಕಿ ಮತ್ತು ಗರನಲ್ಲ್ ಹೊಡೆಸಿದ್ದರ ಪರಿಣಾಮದಿಂದ ಚಿರತೆಗಳು ಕುರುದ್ವೀಪದಿಂದ ಕಾಲ್ಕಿತ್ತು ಮರಳಿ ನದಿಯನ್ನು ಈಜಿಕೊಂಡು ಹೋಗಿವೆ,ಕ್ರೂರ ಕಾಡು ಪ್ರಾಣಿಗಳು ಕುರುದ್ವೀಪ ಪ್ರವೇಶ ಮಾಡಿರುವುದು ಇದೆ ಮೊದಲು.
-ರಾಮಚಂದ್ರ ಹೆಬ್ಬಾರ್,ಕುರುದ್ವೀಪ ನಿವಾಸಿ
ಹಾಡುಗಲಿನಲ್ಲೆ ಚಿರತೆಗಳು ಹೆಮ್ಮುಂಜೆ ಪರಿಸರದಲ್ಲಿ ಕಾಣಿಸಿಕೊಳ್ಳುತ್ತಿವೆ.ಮಕ್ಕಳನ್ನು ಅಂಗನವಾಡಿ,ಶಾಲೆಗಳಿಗೆ ಕಳುಹಿಸಲು ಭಯವಾಗುತ್ತಿದೆ.ಶಾಲೆಗಳಿಗೆ ತೆರಳು ಕಾಲ ದಾರಿಯಲ್ಲೆ ಹೋಗಬೇಕು.4 ರಿಂದ 5 ಕ್ಕೂ ಹೆಚ್ಚಿನ ಚಿರತೆಗಳು ಓಡಾಡಿಕೊಂಡಿರುವ ಸಾಧ್ಯತೆಗಳಿವೆ.
-ಚಂದ್ರಶೇಖರ ಆಚಾರ್ಯ,ಹೆಮ್ಮುಂಜೆ (ನಾಡ)
ಬೋನ್ ಇಟ್ಟಿದ್ದರೂ ಚಿರತೆಗಳು ಸೆರೆಗೆ ಸಿಗುತ್ತಿಲ್ಲ,ಅಪಾಯಕಾರಿ ಮನೋಭಾವವನ್ನು ಹೊಂದಿರುವ ಚಿರತೆಗಳನ್ನು ಸೆರೆ ಹಿಡಿಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು.ದನಕರು,ನಾಯಿಗಳನ್ನು ಬಲಿ ಪಡೆಯುತ್ತಿರುವ ಚಿರತೆಗಳು ಮಾನವರ ಜೀವಕ್ಕೂ ಕುತ್ತು ತರಹಬಹುದು.
-ಸುಧೀರ್,ಕೋಣ್ಕಿ ದರ್ಲೆಗುಡ್ಡೆ
ಚಿರತೆ ಸೆರೆಗೆ ಈಗಾಗಲೆ ಎರು ಕಡೆ ಬೋನ್ ಇಡಲಾಗಿದೆ,ಚಿರತೆ ಸೆರೆಗೆ ಎಲ್ಲಾ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ, ಸ್ಥಳೀಯರು ಸಹಕರಿಸಬೇಕು ಸಾರ್ವಜನಿಕರ ಅಭಿಪ್ರಾಯಕ್ಕೆ ಸ್ಪಂದನೆ ನೀಡಲಾಗುವು.
– ಕಿರಣ್ ಬಾಬು,ಆರ್‍ಎಫ್‍ಒ ಕುಂದಾಪುರ