ಕಾರವಾರ: ರಾಜ್ಯ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಸಾಲು ಸಾಲು ಜನಪರ ಯೋಜನೆಗಳನ್ನು ಜಾರಿಗೆ ತಂದರು ವಿರೋಧ ಪಕ್ಷಗಳಿಗೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಮಿತ್ರ ಸಮಾಜ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಬೃಹತ್ ಮಹಿಳಾ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಆಡಳಿತ ಪಕ್ಷ ದಾರಿ ತಪ್ಪಿದಾಗ ಅವರ ಕಿವಿಹಿಂಡುವ ಕೆಲಸವನ್ನು ವಿರೋಧ ಪಕ್ಷಗಳು ಮಾಡಬೇಕು. ಟೀಕೆ, ಟಿಪ್ಪಣಿಗಳನ್ನೂ ಮಾಡಬೇಕು ಆದರೆ, ಅದು ಸತ್ಯಕ್ಕೆ ಅಡಿಪಾಯವಾಗಿರಬೇಕು. ಅದು ಬಿಟ್ಟು ಅದು ಕಿರುಕುಗಳ ತರುವ, ಹಿಯಾಳಿಸುವ ರೀತಿಯಲ್ಲಿ ಇರಬಾರದು. ಕೋವಿಡ್ಗೆ ಲಸಿಕೆ ಕಂಡು ಹಿಡಿದ ಸಂದರ್ಭದಲ್ಲಿ ಅದನ್ನು ತೆಗೆದುಕೊಳ್ಳಬೇಡಿ. ಲಸಿಕೆ ಹಾಕಿಸಿಕೊಂಡರೆ ಮಕ್ಕಳಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಮುಂದೆ ಪರಿಸ್ಥಿತಿ ಹೇಗೆ ಬಂತೆಂದರೆ ಅವರ ಗುಟ್ಟಾಗಿ ಹೋಗಿ ಶರ್ಟಿನ ತೋಳು ಮಡಚಿಕೊಂಡು ಲಸಿಕೆ ಹಾಕಿಸಿಕೊಂಡು ಬಂದಿದ್ದರು ಎಂದು ಲೇವಡಿ ಮಾಡಿದರು.
ಕೋವಿಡ್ ಬಂದ ಸಂದರ್ಭದಲ್ಲಿ ಮೋದಿ ಸರ್ಕಾರ ಲಸಿಕೆ ಕಂಡು ಹಿಡಿದಿದ್ದರಿಂದ ಇಂದು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ. ಕೇವಲ ಭಾರತಕ್ಕಷ್ಟೇ ಅಲ್ಲ ವಿಶ್ವದ ಅನೇಕ ರಾಷ್ಟ್ರಗಳಿಗೆ ಭಾರತದಿಂದ ಲಸಿಕೆ ಪೂರೈಕೆ ಮಾಡಲಾಯಿತು. ಇದು ಭಾರತದ ಹೆಮ್ಮೆ ಎಂದರು.
ಮುಂದಿನ ಚುನಾವಣೆಯಲ್ಲಿ ವಿರೋಧಿಗಳಿಗೆ ತಕ್ಕಪಾಠ ಕಲಿಸಲು ಬಿಜೆಪಿಯ ನಾರಿಶಕ್ತಿ ಶಕ್ತಿಮೀರಿ ಪ್ರಯತ್ನ ಮಾಡಬೇಕು ಜಿಲ್ಲೆಯ ಆರಕ್ಕೆ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಬಿಜೆಪಿಯ ರಾಜ್ಯ ಕಾರ್ಯದರ್ಶಿ ಭಾರತಿ ಮುಗ್ದುಂ ಮಾತನಾಡಿ, ಮಹಿಳೆಯರು ಶಕ್ತಿವಂತರಾದಾಗ ದೇಶ ಶಕ್ತಿಯುತವಾಗಿ ಬೆಳೆಯುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಶಾಸಕಿ ರೂಪಾಲಿ ನಾಯ್ಕ ಮಾತನಾಡಿದರು. ಮೀನುಗಾರರ ಪ್ರಕೋಷ್ಠದ ರಾಜ್ಯ ಸಂಚಾಲಕ, ಉಷಾ ಹೆಗಡೆ, ಗಜಾನನ ಗುನಗಾ, ಗುರುಪ್ರಸಾದ ಹೆಗಡೆ, ಕಾರವಾರ ನಗರ ಮಂಡಲದ ಅಧ್ಯಕ್ಷ ನಾಗೇಶ ಕುರ್ಡೇಕರ್, ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ ಗುನಗಿ ವೇದಿಕೆಯಲ್ಲಿದ್ದರು. ಬಿಜೆಪಿಯ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಅವರು ಪ್ರಾಸ್ತಾವಿಕ ಮಾತನಾಡಿದರು. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶೋಭಾ ನಾಯ್ಕ ಸ್ವಾಗತಿಸಿದರು.