ಉಡುಪಿ: ದಿನಕ್ಕೆ ನಾಲ್ಕೈದು ಬಾರಿ ಆಜಾನ್ ಕೂಗುವುದು ತಪ್ಪು. ಇದು ಜನರ ಮನಸ್ಸಿನ ಭಾವನೆ. ಅದನ್ನು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಅಭಿಪ್ರಾಯ ಹೇಳಲು ನನಗೆ ಯಾವುದೇ ಮುಲಾಜಿಲ್ಲ. ನನ್ನ ಹೇಳಿಕೆ ವಿವಾದಾತ್ಮಕ ಆಗಲು ಸಾಧ್ಯವಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿದರು.
ಮಣಿಪಾಲದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ನಾಲ್ಕೈದು ಬಾರಿ ಮೈಕ್ ನಲ್ಲಿ ಆಜಾನ್ ಕೂಗ್ತಾರೆ. ಇದರಿಂದ ಆಸ್ಪತ್ರೆಯ ರೋಗಿಗಳಿಗೆ, ಸಾರ್ವಜನಿಕರಿಗೆ ಸಮಸ್ಯೆ ಆಗುತ್ತದೆ. ರಾಜ್ಯದಲ್ಲಿ ಪರೀಕ್ಷೆ ನಡೆಯುತ್ತಿದ್ದು, ವಿದ್ಯಾರ್ಥಿಗಳ ಓದಿಗೆ ತೊಂದರೆ ಆಗುತ್ತಿದೆ. ಹಲವಾರು ಕಾರ್ಯಕ್ರಮಗಳಾಗುತ್ತಿದೆ. ಅದಕ್ಕೂ ಆಜಾನ್ ನಿಂದ ಸಮಸ್ಯೆ ಆಗುತ್ತಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಯೋಜನೆಗೆ ಕಾಂಗ್ರೆಸ್ ಒಂದು ರೂಪಾಯಿ ಕೊಟ್ಟಿಲ್ಲ. ಯಾರದ್ದೋ ಮನೆ ಕೂಸನ್ನು ನಂದು ಅಂದ್ರು ಆಗುತ್ತಾ?. ಈಗ ಕಾಂಗ್ರೆಸ್ ಗೆ ಅಜೆಂಡಾ ಇಲ್ಲ. ಏನೇ ಹೇಳಿದ್ರು ವಾಪಾಸ್ ಹೊಡೆಯುತ್ತಿದೆ ಎಂದು ಟೀಕಿಸಿದರು.