ಮಳವಳ್ಳಿ: ಅನಾರೋಗ್ಯದಿಂದ ಮಿದುಳು ನಿಷ್ಕ್ರಿಯಗೊಂಡಿದ್ದ ತಮ್ಮ ತಾಯಿ ಬದುಕುವುದಿಲ್ಲ ಎಂದು ತಿಳಿದ ಆಕೆಯ ಮಗ ತಾಯಿ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಐವರಿಗೆ ಹೊಸ ಜೀವನ ನೀಡಿ ಸಾರ್ಥಕತೆ ಮೆರೆದಿರುವ ಘಟನೆ ತಾಲ್ಲೂಕಿನ ಕೋರೇಗಾಲ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪುಟ್ಟರಾಮೇಗೌಡ ಅವರ ಪತ್ನಿ ನಾಗಮ್ಮ (45) ಕೆಲ ದಿನಗಳಿಂದ ತಲೆ ನೋವಿನಿಂದ ಬಳಲುತ್ತಿದ್ದರು. ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಮಹಿಳೆಯನ್ನು ಕುಟುಂಬದ ಸದಸ್ಯರು ದಾಖಲಿಸಿ ಪರೀಕ್ಷೆಗೆ ಒಳಪಡಿಸಿದರು. ಆಸ್ಪತ್ರೆಯ ವೈದ್ಯರು ತಲೆಯಲ್ಲಿ ಗೆಡ್ಡೆಯ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಮೆದುಳು ನಿಷ್ಕ್ರಿಯಗೊಂಡಿದೆ, ಬದುಕುಳಿಯುವ ಸಾಧ್ಯತೆ ತೀರ ಕಡಿಮೆ ಇದೆ ಎಂದರು.
ಮತ್ತೆ ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ವೈದ್ಯರನ್ನು ಸಂಪರ್ಕಿಸಿದ ಸಂದರ್ಭದಲ್ಲಿ ವರದಿಗಳನ್ನು ಪರೀಕ್ಷಿಸಿದ ವೈದ್ಯರು, ಅಂಗಾಂಗ ದಾನ ಮಾಡುತ್ತೀರಾ ಎಂದು ಪ್ರಶ್ನಿಸಿದರು.
ನಾಗಮ್ಮ ಅವರ ಮಗ ಚರಣ್ ತಂದೆ ಪುಟ್ಟರಾಮೇಗೌಡ ಅವರೊಂದಿಗೆ ಚರ್ಷಿಸಿ ನಮ್ಮ ಅಮ್ಮ ಹೇಗಿದ್ದರೂ ಬದುಕುವುದಿಲ್ಲ. ಅಂಗಾಂಗ ದಾನ ಮಾಡಿರುವುದರಿಂದ ನಾಲ್ಕೈದು ಮಂದಿಗೆ ಹೊಸ ಬಾಳು ನೀಡಬಹುದು ಎಂದು ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಅಂಗಾಂಗ ದಾನ ಮಾಡಿದ್ದಾರೆ.
ಶನಿವಾರ ನಡೆದ ಶಸಕ್ರಿಯೆ ಮೂಲಕ ಯಕೃತ್, ಎರಡು ಮೂತ್ರಪಿಂಡಗಳನ್ನು ಅಪೋಲೋ ಬಿಜಿಎಸ್ ಆಸ್ಪತ್ರೆಯ ಇಬ್ಬರು ರೋಗಿಗಳಿಗೆ, ಲಿವರ್ ಹಾಗೂ ಹೃದಯದ ಕವಚವನ್ನು ಗ್ರೀನ್ ಕಾರಿಡರ್ ನಿಯಮದಲ್ಲಿ ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು.
ಎರಡು ಕಣ್ಣುಗಳನ್ನು ಮೈಸೂರಿನ ಐ ಬ್ಯಾಂಕ್‌ಗೆ ನೀಡಲಾಗಿದ್ದು, ಆ ಮೂಲಕ ಮಹಿಳೆಯ ಕುಟುಂಬದವರು, ಐವರಿಗೆ ಹೊಸ ಜೀವನ ನೀಡಿ ಸಾರ್ಥಕತೆ ಮೆರೆದಿದ್ದಾರೆ.
ಮೃತ ನಾಗಮ್ಮ ಅವರ ದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರ ಮಾಡುವ ವೇಳೆ ಆಸ್ಪತ್ರೆಯ ವೈದ್ಯರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿಗಳು ಎರಡು ಬದಿಯಲ್ಲಿ ಸಾಲಾಗಿ ನಿಂತು ಗೌರವ ಸಲ್ಲಿಸಿದರು.
ವೈದ್ಯರಿಂದ ಸಂದೇಶ: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅಂಗಾಂಗ ದಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಅವಶ್ಯಕತೆ ಇದೆ. ಬಹಳಷ್ಟು ಮಂದಿಗೆ ಸಕಾಲಕ್ಕೆ ಅಂಗಾಂಗಗಳು ಸಿಗದೇ ತಮ್ಮ ಪ್ರಾಣ ಕಳೆದುಕೊಳ್ಳುತ್ತಿರುವ ಉದಾಹರಣೆ ಇದೆ. ಬಹಳಷ್ಟು ಮಂದಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಜೀವ ಉಳಿಸಿಕೊಳ್ಳಲು ದಾನ ಮಾಡುವಂತಹ ಅಂಗಾಂಗಗಳನ್ನು ಎದುರು ನೋಡುತ್ತಿದ್ದಾರೆ ಎಂದರು.
ಈ ಬಗ್ಗೆ ಪ್ರಚಾರ ಮತ್ತು ಅರಿವು ಕಾರ್ಯಕ್ರಮಗಳನ್ನು ಸರ್ಕಾರ ನಡೆಸಿದರೂ ಅಂಗಾಂಗ ದಾನಕ್ಕೆ ಮುಂದಾಗುವವರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು. ಹೀಗಾಗಿ ಮಿದುಳು ನಿಷ್ಕ್ರೀಯಗೊಂಡಾಗ ಮಣ್ಣಲ್ಲಿ ಮಣ್ಣಾಗಿ ಹೋಗುವ ದೇಹದ ಅಂಗಾಂಗಳಿಂದ ಇನ್ನೊಂದಷ್ಟು ಜೀವಗಳನ್ನು ಉಳಿಸಲು ಸಾಧ್ಯವಿದ್ದು, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರೇ ಮಿದುಳು ನಿಷ್ಕ್ರೀಯಗೊಂಡಾಗ ಸಂದರ್ಭದಲ್ಲಿ ಅಂಗಾಂಗ ಮುಂದಾಗುತ್ತಿದ್ದು, ನಗರ ಪ್ರದೇಶಗಳಲ್ಲೂ ಈ ಬಗ್ಗೆ ಅರಿವು ಮೂಡಬೇಕಿದೆ ಎಂದು ಅಪೋಲೋ ಬಿಜಿಎಸ್ ಆಸ್ಪತ್ರೆಯ ಆಡಳಿತ ವಿಭಾಗದ ಮುಖ್ಯಸ್ಥ ಎನ್.ಜಿ.ಭರತೇಶ್ ರೆಡ್ಡಿ ಮನವಿ ಮಾಡಿದರು.