ಹೊನ್ನಾವರ: ತಾಲೂಕಿನ ಸೂಳಿಮಕ್ಕಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ರಸ್ತೆ ಕುಸಿತ ಉಂಟಾಗಿದ್ದು ಹೊನ್ನಾವರ ಸಾಗರ ಮಾರ್ಗದಲ್ಲಿ ಸಂಚರಿಸುವ ಭಾರೀ ವಾಹನಗಳು ಬದಲಿ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದ್ದು ಒಂದು ಬದಿಯಲ್ಲಿ ರಸ್ತೆ ಕುಸಿದಿದೆ. ಹೊನ್ನಾವರ ಮಾವಿನಗುಂಡಿ ಮಾರ್ಗವಾಗಿ ಬೆಂಗಳೂರು, ಸಾಗರ, ಶಿವಮೊಗ್ಗ, ಜೋಗ ಜಲಪಾತ ಮೊದಲಾದ ಸ್ಥಳಗಳಿಗೆ ಪ್ರತಿದಿನ ಖಾಸಗಿ ಬಸ್ಸುಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿದ್ದು ರಸ್ತೆ ಮತ್ತಷ್ಟು ಕುಸಿಯುವ ಅಪಾಯ ಇರುವ ಕಾರಣ ಬದಲಿ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.
ತಾಲೂಕಿನ ಗುಂಡಬಾಳ, ಭಾಸ್ಕೇರಿ, ಬಡಗಣೆ ನದಿ ತೀರ ಜಲಮಯ ವಾಗಿದ್ದು, ೧೨ ಕಡೆ ಕಾಳಜಿ ಕೇಂದ್ರ ತೆರೆದಿದ್ದು, ೩೦೮ ಜನರನ್ನು ಕಾಳಜಿ ಸ್ಥಳಾಂತರಗೊಳಿಸಿದ್ದಾರೆ. ಕಳೆದ ಕೆಲವು ದಿನದ ಹಿಂದೆ ಕಾಳಜಿ ಕೇಂದ್ರದಿದ ಮನೆಗೆ ಬಂದು ಸಹಜ ಸ್ಥಿತಿಗೆ ಮರಳುವಷ್ಟರಲ್ಲಿ ಮತ್ತೆ ಸುರಿದ ಮಳೆಗೆ ಪುನಃ ಕಾಳಜಿ ಕೇಂದ್ರದತ್ತ ಮುಖ ಮಾಡುವಂತಾಗಿದೆ. ಗುಂಡಬಾಳ, ಭಾಸ್ಕೇರಿ, ಬಡಗಣಿ ನದಿಯು ನಿರಂತರ ಉಕ್ಕಿ ಹರಿಯುತ್ತಿದ್ದು ನದಿ ಅಂಚಿಗೆ ವಾಸ್ತವ್ಯ ಮಾಡಿದವರಿಗೆ ಆತಂಕ ದೂರ ಮಾಡಲು ಉಸ್ತುವಾರಿ ಸಚೀವರಾದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ದಿನಕರ ಶೆಟ್ಟಿ, ಸುನೀಲ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿ ಹಾನಿಯಾದ ಪ್ರದೇಶದ ಪಂಚನಾಮೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತಾಲೂಕಿನ ಚಿಕ್ಕನಕೋಡ , ಮುಗ್ವಾ, ಖರ್ವಾ, ಹೊಸಾಕುಳಿ, ಹಳದೀಪುರ, ನವಿಲಗೋಣ, ಕಡತೋಕಾ, ಕರ್ಕಿ, ಸಾಲ್ಕೋಡ್ ಗ್ರಾ.ಪಂ. ವ್ಯಾಪ್ತಿಯ ನೂರಾರು ಮನೆಗಳಿಗೆ ಮಳೆ ನೀರು ನುಗ್ಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಂದಾಯ, ಪೊಲೀಸ್, ಪಂಚಾಯತ ಮಟ್ಟದ ಅಧಿಕಾರಿಗಳು ಹಾಗೂ ನಿಯೋಜಿಸಲಾದ ನೋಡೆಲ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಹಳದೀಪುರ ಭಾಗಕ್ಕೆ ಎಸ್.ಡಿ.ಆರ್.ಎಫ್ ತಂಡ ಹಾಗೂ ಜಿಲ್ಲಾ ಅಗ್ನಿಶಾಮಕ ಸಿಬ್ಬಂದಿಗಳು ಭೇಟಿ ನೀಡಿ ನೀರು ನುಗ್ಗಿದ ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಕ್ಕೆ ಸಾಗಿಸಲು ಶ್ರಮಿಸಿದರು.
ತಾಲೂಕಿನಲ್ಲಿ ಶುಕ್ರವಾರ ರಾತ್ರಿಯಿಂದ ಸುರಿಯುತ್ತಿದ್ದ ಭಾರಿ ಮಳೆಯಿಂದ ತಾಲೂಕಿನಲ್ಲಿ ಅಪಾಯದ ಮಟ್ಟ ಮೀರಿ ತಗ್ಗುಪ್ರದೇಶದ ತೋಟ, ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.