News Kannada
Sunday, April 02 2023

ಉತ್ತರಕನ್ನಡ

ಗೋಕರ್ಣ: ಬಾಹ್ಯ ಶತ್ರುಗಳ ಜತೆಗೆ ಅಂತಃಶತ್ರುಗಳನ್ನೂ ಗೆಲ್ಲಬೇಕು- ರಾಘವೇಶ್ವರ ಶ್ರೀ

Gokarna: Along with external enemies, we must also conquer the inner enemies: Raghaveshvara Sri
Photo Credit : By Author

ಗೋಕರ್ಣ: ಇಡೀ ವಿಶ್ವದಲ್ಲಿ ಅಸುರ ಶಕ್ತಿಗಳು ತಾಂಡವವಾಡುತ್ತಿವೆ. ಸಜ್ಜನರಿಗೆ ಕಾಲವಲ್ಲ ಎಂಬ ಪರಿಸ್ಥಿತಿ ಇದೆ. ಬಾಹ್ಯ ಶತ್ರುಗಳನ್ನು ಸಂಹರಿಸುವ ಜತೆಗೆ ಜಗನ್ಮಾತೆಯಾದ ದೇವಿ ನಮ್ಮ ಅಂತರಂಗದ ದುರ್ಭಾವ, ದುರ್ಗುಣಗಳನ್ನೂ ಮರ್ಧಿಸಲಿ ಎಂದು  ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಆಶಿಸಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶುಕ್ರವಾರ ನಡೆದ ಸಹಸ್ರ ಚಂಡೀಯಾಗದ ಪೂರ್ಣಾಹುತಿ ಬಳಿಕ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ನಮ್ಮೊಳಗಿನ ಹಾಗೂ ಹೊರಗಿನ ದುಷ್ಟಶಕ್ತಿಗಳ ದಮನಕ್ಕಾಗಿ ಜಗನ್ಮಾತೆಯನ್ನು ಉಪಾಸನೆ ಮಾಡೋಣ. ವಿಶ್ವಕ್ಕೆ ಒದಗಿರುವ ಸಂಕಷ್ಟವನ್ನು ಪ್ರಕೃತಿಸ್ವರೂಪಳಾದ ದೇವಿ ಮಾತ್ರ ಪರಿಹರಿಸಬಲ್ಲಳು ಎಂದು ಅಭಿಪ್ರಾಯಪಟ್ಟರು.

ಇಂಥ ಸತ್ಕಾರ್ಯಗಳಿಂದ ಜೀವನ ಕೃತಾರ್ಥವಾಗುತ್ತದೆ. ಕೆಲ ಪವಿತ್ರ ಕಾರ್ಯಗಳು ಅನಾಯಾಸವಾಗಿ ನಡೆಯುತ್ತವೆ. ಎಲ್ಲ ದೇವಾದಿದೇವತೆಗಳ ಶಕ್ತಿ ಪಡೆದು, ದೇವರು ಹಾಗೂ ತಾಯಿ ಸಂಗಮಗೊಂಡು ಮಹಾದೇವಿಯಾಗಿ ಆವೀರ್ಭವಿಸಿದ ಮಾತೃಚೈತನ್ಯವನ್ನು ಭಾವಿಸಿ, ಉಪಾಸನೆ ಮಾಡಿ ಜೀವನ ಕೃತಾರ್ಥಪಡಿಸಿಕೊಳ್ಳೋಣ ಎಂದು ಸೂಚಿಸಿದರು.

ಯಾರು ದೇವಿಯನ್ನು ಶರಣು ಹೋಗುತ್ತಾರೋ ಅಂಥವರ ಬದುಕು ಎಂಥ ಪ್ರಪಾತದಲ್ಲಿದ್ದರೂ, ಅಂಥವರ ಸಂಕಲ್ಪದಿಂದ ಬದುಕನ್ನು ಮೇಲಕ್ಕೆತ್ತಿ ಸಮಭೂಮಿಯಾಗಿ ಮಾಡುತ್ತಾಳೆ. ಅಂತಃಶತ್ರುಗಳನ್ನು ನಿಗ್ರಹಿಸುವಂತೆ ದೇವಿಯನ್ನು ಪ್ರಾರ್ಥಿಸಿದರೆ, ಆತನಿಗೆ ಬಾಹ್ಯ ಶತ್ರುಗಳು ಸೃಷ್ಟಿಯಾಗುವ ಸಾಧ್ಯತೆಯೇ ಇಲ್ಲ. ರಾಮ ರಾವಣರ ವೈಷಮ್ಯಕ್ಕೆ ರಾವಣನೊಳಗಿನ ದುಷ್ಕಾಮ ಕಾರಣ. ರಾಮನನ್ನು ಕೊಂದದ್ದು ಕಾಮವೇ ವಿನಃ ರಾಮ ನಿಮಿತ್ತ ಮಾತ್ರ ಎಂದು ಮಾರ್ಮಿಕವಾಗಿ ನುಡಿದರು.

ದೇವಿ ಮೂಲಪ್ರಕೃತಿ ಸ್ವರೂಪ. ನಮ್ಮ ಅಂತರಂಗದಲ್ಲಿ ದೇವಿಯನ್ನು ಭಾವಿಸಿ ಪೂಜಿಸಬೇಕು. ಅಂತರಂಗದಲ್ಲಿ ದೇವಿಯನ್ನು ಭಾವಿಸದೇ ಬಾಹ್ಯ ಪೂಜೆಯಿಂದ ಯಾವ ಪ್ರಯೋಜನವೂ ಇಲ್ಲ. ದೇವಿ ನಮ್ಮೊಳಗೆ ಇದ್ದಾಳೆ; ಆಕೆಯನ್ನು ಸ್ತುತಿಸಿದರೆ ನಮ್ಮೊಳಗಿನಿಂದಲೇ ಆಕೆ ಆವೀರ್ಭವಿಸುತ್ತಾಳೆ ಎಂದರು.

ಕಲಿಯುಗದಲ್ಲಿ ರಾಕ್ಷಸರು ಮನೆ ಮನೆಗಳಲ್ಲಿ ಹಾಗೂ ಮನ ಮನಗಳಲ್ಲೂ ಇದ್ದಾರೆ. ಅರಿಷಡ್ವರ್ಗಗಳೇ ನಿಜವಾದ ರಾಕ್ಷಸರು. ವಿಕೃತವಾಗಿ ಈ ಭಾವ ಯಾರಲ್ಲಿ ಪ್ರಕಟವಾಗುತ್ತದೆಯೋ ಅವರೇ ನಿಜವಾದ ರಾಕ್ಷಸರು. ರಾಕ್ಷಸ ಭಾವಗಳು ನಮ್ಮನ್ನು ಆಡಿಸಿದಾಗ ನಾವೇ ರಾಕ್ಷಸರಾಗುತ್ತಾರೆ. ಅಸುರ ಸಂಹಾರಿಣಿ ಮೊದಲು ನಮ್ಮ ದುರ್ಭಾವಗಳನ್ನು ಸಂಹರಿಸಬೇಕು ಎಂದು ವಿಶ್ಲೇಷಿಸಿದರು.

ಒಂದು ಲಕ್ಷ ಆಹುತಿ, 480 ವೈದಿಕರಿಂದ ಸಹಸ್ರಾವರ್ತ ಪಾರಾಯಣ, ಗೋಕರ್ಣದ ಇಡೀ ವೈದಿಕ ಸಮೂಹದ ಸೇವೆ ಇಲ್ಲಿ ಸಂದಿದೆ. 60 ಗಣಪತಿ ಅಥರ್ವಶೀರ್ಷ ಹವನ, 60 ನವಗ್ರಹ ಹವನ, 13 ನವಚಂಡಿ ಹವನ, ದತ್ತಾತ್ರೇಯ ಹವನ, ಪವಮಾನ ಹವನ, ಆಂಜನೇಯ ಹವನ, ಮಹಾಮೃತ್ಯುಂಜಯ ಹವನವೇ ಮೊದಲಾಗಿ ಹಲವು ಧರ್ಮಕಾರ್ಯಗಳು ಅರುವತ್ತು ದಿನಗಳ ಪರ್ಯಂತ ನಿರಂತರವಾಗಿ ನಡೆದಿದೆ. ಗೋಕರ್ಣದ ಗತವೈಭವ ಸ್ಥಿತವೈಭವವಾಗಿಸುವ ಉದ್ದೇಶದಿಂದ ಈ ಪುಣ್ಯಭೂಮಿಯಲ್ಲಿ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಹುಟ್ಟಿಕೊಂಡಿದೆ. ಈ ಮೂಲಕ ಈ ಪುಣ್ಯಭೂಮಿಯ ಗತವೈಭವ ಮರುಕಳಿಸಲು ದೇವಿ ಅನುಗ್ರಹಿಸಲಿ ಎಂದು ಆಶಿಸಿದರು.

See also  ಕಾರವಾರ: ಕುಮಟಾದಲ್ಲಿ ಅಂಗವಿಕಲ ಕರು ಜನನ

ನಾಲ್ಕೂ ವೇದಗಳ ಅಧ್ಯಯನಕ್ಕಾಗಿ ಇಲ್ಲಿರುವ ಶಿವ ಗುರುಕುಲ ಸ್ಥಾಪಿಸಲಾಗಿದೆ. ಜಗತ್ತಿನಲ್ಲಿ ಉಳಿದುಕೊಂಡಿರುವ ಎಲ್ಲ ವೇದಶಾಖೆಗಳ ಸಂರಕ್ಷಣೆ ಕಾರ್ಯ ಇಲ್ಲಿಂದಲೇ ಆರಂಭವಾಗಬೇಕು ಎಂಬ ಉದ್ದೇಶದಿಂದ ಮಹತ್ಕಾರ್ಯ ಆರಂಭವಾಗಿದೆ ಎಂದು ಪ್ರಕಟಿಸಿದರು. ಇದನ್ನು ಪೋಷಿಸುವ ಮೂಲಕ ಭಾರತದ ಸನಾತನ ಸಂಸ್ಕೃತಿ ಸಂರಕ್ಷಣೆಗೆ ಪಣ ತೊಡಬೇಕು ಎಂದು ಕರೆ ನೀಡಿದರು.

ಕರ್ನಾಟಕ ಬ್ಯಾಂಕಿನ ಸಿಇಓ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್.ಮಹಾಬಲೇಶ್ವರ ಮಾತನಾಡಿ, ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವೇದ ಸಂಶೋಧನಾ ಸಂಸ್ಥೆಗೆ ಕರ್ನಾಟಕ ಬ್ಯಾಂಕ್ ಕೈಜೋಡಿಸಿದೆ. ಭವ್ಯ ಭಾರತದ ಭವಿಷ್ಯ ವಿವಿ ಮೂಲಕ ಗಟ್ಟಿಯಾಗುತ್ತಿದೆ ಎಂದರು.

ಸಿದ್ದಮೂಲೆ ವೆಂಕಟರಮಣ ಭಟ್ ಪ್ರಕಟಿಸಿದ ಸುಧಾಮ ಚರಿತ್ರೆ ಕೃತಿಯನ್ನು ಶ್ರೀಗಳು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಿದರು. ಪರಂಪರಾ ಗುರುಕುಲದ ಪ್ರಾಚಾರ್ಯ ನರಸಿಂಹ ಭಟ್ ಪ್ರಸ್ತಾವಿಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮಹಿಳಾ ಸಂಚಾಲಕಿ ಡಾ.ಶುಭಮಂಗಲ, ಜಿಲ್ಲಾ ಮಹಿಳಾ ಸಂಯೋಜಕಿ ನಿರ್ಮಲಾ ಹೆಗಡೆ ಉಪಸ್ಥಿತರಿದ್ದರು. ಕೂಟೇಲು ರಾಮಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

178
Srinivas Badkar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು