ಕಾರವಾರ: ಭಾರತ ಸರಕಾರದ ಪರಿಸರ ಮತ್ತು ಅರಣ್ಯ ಇಲಾಖೆಯ ನಿರ್ದೇಶನದ ಮೇರೆಗೆ ಸೆಪ್ಟೆಂಬರ್ 11ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ದೇಶದ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ಮಾಡಿದ ತ್ಯಾಗ ಮತ್ತು ಬಲಿದಾನಗಳ ಸ್ಮರಣೆಗಾಗಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಡಾ. ಪ್ರಶಾಂತಕುಮಾರ ಕೆ.ಸಿ ಹೇಳಿದರು.
ನಗರದ ಕರ್ನಾಟಕ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೋಧಪುರ್ ಮಹಾರಾಜ ಅಭಯಸಿಂಗ್ ನ ಸೈನಿಕರು ಕೇಜರ್ಲಿ ಪ್ರಾಂತ್ಯದಲ್ಲಿ ರಾಜನ ಹೊಸ ಅರಮನೆಗೆ ಅವಶ್ಯವಿದ್ದ ಕೇಜರ್ಲಿ ಮರಗಳನ್ನು ಕಡಿಯಲು ವಿರೋಧಿಸಿದ ಬಿಷ್ಣೋಯೀ ಸಮುದಾಯದ 363 ಪುರುಷ , ಮಹಿಳೆ ಮತ್ತು ಮಕ್ಕಳನ್ನು ಕೊಲ್ಲಲಾಯಿತು. ಮರಗಳ ಸಂರಕ್ಷಣೆಗಾಗಿ ಬಲಿದಾನ ಹೊಂದಿದ ಬಿಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರಕಾರ ಈ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಿದೆ ಎಂದು ತಿಳಿಸಿದರು.
ಕಳೆದ 50 ವರ್ಷಗಳಿಂದಲೂ ಅಮೂಲ್ಯ ಅರಣ್ಯ ಸಂಪತ್ತು ಮತ್ತ ವನ್ಯಜೀವಿಗಳ ಸಂರಕ್ಷಣೆಯಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದಂತಹ 54 ಅಧಿಕಾರಿ ಮತ್ತು ನೌಕರರ ಸ್ಮರಣೆಗಾಗಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಈ ಹುತಾತ್ಮರ ದಿನಾಚರಣೆಯನ್ನು ರಾಜ್ಯದ ಕೇಂದ್ರ ಸ್ಥಾನದಲ್ಲಿ ಅಷ್ಟೇ ಅಲ್ಲದೇ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಆಚರಿಸಲಾಗುತ್ತಿದೆ. ಹುತಾತ್ಮ ಸಿಬ್ಬಂದಿಗಳ ಅಸಾಧಾರಣ ಪ್ರಯತ್ನ, ಧೈರ್ಯಶೀಲ ಕಾರ್ಯಗಳು, ಸರ್ವೋಚ್ಚ ತ್ಯಾಗಗಳು, ಅಪಾಯಕ್ಕೆ ಒಳಗಾದ ಸಂದರ್ಭ, ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಿ ಕಾಪಾಡಲು ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿವೆ ಎಂದು ಹೇಳಿದರು.
ಕಾರವಾರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ಎ. ನಾಲವಾಡೆ ಅರಣ್ಯ ಸಂರಕ್ಷಣೆಯಲ್ಲಿ ಹುತಾತ್ಮರಾದ ಸಿಬ್ಬಂದಿಗಳಿಗೆ ಗೌರವ ನಮನ ಸಲ್ಲಿಸಿ ಮಾತನಾಡಿ, ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳು ರಾಷ್ಟ್ರೀಯ ಸಂಪತ್ತಗಳಾಗಿದ್ದು, ಅವುಗಳನ್ನು ಮುಂದಿನ ಪೀಳಿಗೆಗೂ ಉಳಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ನಾಡಿನ ಅಭಿವೃದ್ದಿಗಾಗಿ ಕಾಡಿನ ನಾಶ ಮಾಡದೇ ಸುಸ್ಥಿರ ಅಭಿವೃದ್ಧಿ ಸಾಧಿಸಬೇಕು ಎಂದು ತಿಳಿಸಿದರು.
ಪ್ರತಿಯೊಂದು ಕೆಲಸಗಳು ತನ್ನದೇಯಾದ ಮಹತ್ವವನ್ನು ಹೊಂದಿದ್ದು, ಯಾವುದೂ ಹೆಚ್ಚು ಕಡಿಮೆ ಎಂಬುದಿಲ್ಲ. ಮಾಡುವ ಕೆಲಸವನ್ನು ನಿಷ್ಠೆ, ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಅಂತಹ ಶ್ರಮಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ. ಪ್ರತಿ ಕೆಲಸಕ್ಕೆ, ಕೆಲಸಗಾರರಿಗೆ ಗೌರವ ನೀಡಬೇಕು, ಮಾನವೀಯತೆ ಮೆರೆಯಬೇಕು ಎಂದು ತಿಳಿಸಿದರು.
ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಕುಶಾಲ ತೋಪು ಹಾರಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾರವಾರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ, ಕಾರವಾರ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಜಿ. ನಾವಿ, ಕಾರವಾರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸಿ. ಜಯೇಶ್, ಅಂಕೋಲಾ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಅಣ್ಣಯ್ಯಗೌಡ, ವಿ. ಆರ್. ಗಾಂವಕರ, ಉಪ ವಲಯ ಸಂರಕ್ಷಣಾಧಿಕಾರಿ ಸಂಘದ ಅಧ್ಯಕ್ಷ ಸಚಿನ್ ನಾಯ್ಕ, ಉಪ ವಲಯ ಅರಣ್ಯಾಧಿಕಾರಿ ಗಣಪತಿ, ಅರಣ್ಯ ರಕ್ಷಕ ಸಂಘದ ಅಧ್ಯಕ್ಷ ಕುಮಾರೇಶ್ ಹಿರೇಗೌಡರು, ಗ್ರೂಪ್ ಡಿ ನೌಕರ ಅಮಿತ್ ಗುನಗಾ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.