ಕಾರವಾರ: ಕಳೆದ ಮೂರು ವರ್ಷಗಳಿಂದ ವಿವಿಧ ಕಾರಣಗಳಿಂದ ಮೀನುಗಾರರ ಸಾಕಷ್ಟು ನಷ್ಟದಲ್ಲಿದ್ದಾರೆ. ಅಲ್ಲದೆ ಮೀನುಗಾರಿಕೆಯ ಮೇಲೆ ಬಲವಾದ ಏಟು ಬಿದ್ದ ಕಾರಣದಿಂದ ಸರಕಾರ ಮೀನುಗಾರರ ಸಹಾಯಕ್ಕೆ ಕ್ರಮಕೈಗೊಳ್ಳಬೇಕು ಎಂದು ರಾಷ್ಟ್ರೀಯ ಮೀನುಗಾರರ ಸಂಘಟನೆಯ ಜಿಲ್ಲಾಧ್ಯಕ್ಷ ಗಣಪತಿ ಮಾಂಗ್ರೆ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಚಂಡಮಾರುತ ಪ್ರಾಕೃತಿಕ ವಿಕೋಪ, ಕೊರೊನಾ ಸೇರಿದಂತೆ ನಾನಾ ರೀತಿಯ ಕಾರಣಗಳಿಂದಾಗಿ ಮೀನುಗಾರಿಕೆಗೆ ಇಲ್ಲದಂತಾಗಿದೆ. ಪ್ರಸಕ್ತ ಮೀನುಗಾರಿಕೆಯಲ್ಲಿ ಚೇತರಿಕೆ ಕಾಣಬಹುದೂ ಎನ್ನುವ ನಿರೀಕ್ಷೆ ಇತ್ತು ಆದರೆ ಮೀನುಗಾರರಿಗೆ ನಿರಾಸೆಯಾಗಿದೆ ಎಂದರು.
ಮೀನುಗಾರಿಕೆ ಹಂಗಾಮು ಆರಂಭವಾಗಿ ಎರಡು ತಿಂಗಳು ಕಳೆಯುತ್ತ ಬಂದರೂ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಹಿಡುವಳಿ ಸಾಧ್ಯವಾಗಿಲ್ಲ. ಮಳೆ, ಗಾಳಿ, ಚಂಡಮಾರುತದ ಪರಿಣಾಮ ದೋಣಿಗಳು ಬಂದರಿನಲ್ಲೇ ಲಂಗರು ಹಾಕುವಂತಾಗಿದೆ. ಕಳೆದ ಮೇ-ಜೂನ್ ತಿಂಗಳಲ್ಲಿ ಘಟಿಸಿದ ತೂಫಾನಿನಂದಾಗಿ ಈ ಜಿಲ್ಲೆಯ ಹಲವು ಬಂದರುಗಳಲ್ಲಿ ಬೋಟುಗಳು ಒಡೆದು ಕೋಟ್ಯಂತರ ರೂ. ಹಾನಿಯಾಗಿದೆ. ಸಾಲ ಮಾಡಿ ಬೋಟು ಖರೀದಿ ಮಾಡಿದ ಮೀನುಗಾರರ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಬಂದರುಗಳಲ್ಲಿ ಸಂಭವಿಸುವ ಇಂತಹ ಅವಘಡಗಳಿಗೆ ಮುಖ್ಯ ಕಾರಣವೆಂದರೆ ಹಲವು ವರ್ಷಗಳಿಂದ ಬಂದರುಗಳಲ್ಲಿ ತುಂಬಿರುವ ಹೂಳು ತೆಗೆಯದೆ ಇರುವುದರಿಂದ ಬಂದರುಗಳಲ್ಲಿ ಬೋಟುಗಳಿಗೆ ಹಾನಿಯಾಗಿ ಕೋಟ್ಯಂತರ ರೂ.ಹಾನಿಯಾಗಿದೆ. ಈ ಬಗ್ಗೆ ತನಿಖೆಯಾಗಿ ಸರಕಾರಕ್ಕೆ ವರದಿ ನೀಡಿದರೂ ಇನ್ನೂವರೆಗೆ ಯಾವುದೇ ರೀತಿಯಲ್ಲಿ ಒಂದೇ ಒಂದು ರೂ. ಪರಿಹಾರ, ಮೀನುಗಾರರಿಗೆ ಸಿಕ್ಕಿಲ್ಲ ಎಂದರು.
ಮೀನುಗಾರಿಕಾ ದೋಣಿ ಹಾಗೂ ಸಲಕರಣೆಗಳಿಗಾಗಿ ಮಾಡಿದ ಸಾಲವನ್ನು ತೀರಿಸಲಾಗದೆ ಮೀನುಗಾರರ ಸ್ಥಿತಿ ಆತಂತ್ರವಾಗಿರುತ್ತದೆ. ಮಾಡಿದ ಸಾಲಕ್ಕೆ ಭದ್ರತೆಗಾಗಿ ನೀಡಿದ ಮನೆ ಹಾಗೂ ಜಮೀನುಗಳನ್ನು ಬ್ಯಾಂಕುಗಳು ಮುಟ್ಟುಗೋಲು ಹಾಕಿ ತಮ್ಮ ತಾಬಾಕ್ಕೆ ತೆಗೆದುಕೊಳ್ಳುತ್ತಿರುವುದು ವಿಷಾದನೀಯ. ಇದರಿಂದಾಗಿ ಮುಂದೊಂದು ದಿನ ಮೀನುಗಾರರು ತಮ್ಮ ನೈಜವಾದ ಬದುಕನ್ನು (ಮೀನುಗಾರಿಕೆ) ಬಿಟ್ಟು ಬೇರೊಬ್ಬರ ಮನೆಯ ಜೀತದಾಳಾಗಿ ದುಡಿದು ಬದುಕುವ ಪರಿಸ್ಥಿತಿ ಬಂದರೆ ಅದಕ್ಕೆ ಸರಕಾರವೇ ಕಾರಣವಾಗಿರುತ್ತದೆ ಎಂದು ಮಾಂಗ್ರೆ ತಿಳಿಸಿದರು.
ಜಿಲ್ಲೆಯ ಮೀನುಗಾರಿಕಾ ಇಲಾಖೆಯಲ್ಲಿನ ಅನೇಕ ಹಿರಿಯ ಅಧಿಕಾರಿಗಳು, ಅದರಲ್ಲಿಯೂ ಜಿಲ್ಲೆಯ ಮೀನುಗಾರಿಕಾ ನಿರ್ದೇಶಕರು ಹಾಗೂ ಆನೇಕ ಸಹಾಯಕ ನಿರ್ದೇಶಕರ ಅಭಾವದಿಂದಾಗಿ ಮೀನುಗಾರರ ಮತ್ತು ಅಧಿಕಾರಿಗಳ ನಡುವೆ ಸಂಪರ್ಕದ ಕೊರತೆಯಿಂದಾಗಿ ಸರಕಾರದ ಯಾವುದೇ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದಕ್ಕೆ ತೊಂದರೆಯಾಗುತ್ತಿದೆ, ಈ ಎಲ್ಲ ಸಮಸ್ಯೆಗಳಿಗೆ ಸರಕಾರವು ಎಷ್ಟು ಕಾರಣವೋ ಅಷ್ಟೇ ಜನಪ್ರತಿನಿಧಿಗಳ ನಿರ್ಲಕ್ಷ್ಯತನವು ಮುಖ್ಯವಾಗಿದೆ ಎಂದರು. ಕೊರೊನಾ ಅವಧಿಯಲ್ಲಿ ಸತತ ಎರಡು ವರ್ಷಗಳವರೆಗೆ ಸರಕಾರವು ಮೀನುಗಾರರಿಗೆ ಮೀನುಗಾರಿಕೆಗೆ ತೆರಳದಂತೆ ನಿಷೇಧಿಸಿ ಆದೇಶ ಹೊರಡಿಸಿದ್ದರಿಂದ ಮೀನುಗಾರರು ಮೀನುಗಾರಿಕೆಗೆ ಹೋಗಿರಲಿಲ್ಲ.
ಆ ಸಂದರ್ಭದಲ್ಲಿ ಘನ ಸರಕಾರ ಎಲ್ಲ ಜನಾಂಗದ ಎಲ್ಲ ರೀತಿಯ ಉದ್ಯೋಗಿಗಳಿಗೆ ಪರಿಹಾರ ಘೋಷಿಸಿ ವಿತರಣೆ ಮಾಡಿದಾಗ ನಾವು ಕೂಡ. ನಮ್ಮ ಸಾಲಕ್ಕೆ ಪ್ರಸಕ್ತ ಸಾಲಿನ ಬಡ್ಡಿಯನ್ನು ಮನ್ನಾ ಮಾಡಿ ಪರಿಹಾರವನ್ನು ನೀಡಲು ಸರಕಾರದ ಬಳಿ ಒತ್ತಾಯಿಸಿದರೂ ಸಹ ಸರಕಾರವು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಮಾಂಗ್ರೆ ಹೇಳಿದರು. ಪರ್ಶಿನ್ ಬೋಟ್ ಮೀನುಗಾರರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ವಾಮನ ಹರಿಕಂತ್ರ, ನಗರಸಭೆ ಸದಸ್ಯ ರಾಜೇಶ್ ಮಾಜಾಳಿಕರ, ಹರಿಕರ್ತ-ಖಾರ್ವಿ ಫಿಷರೀಶ್ ಕೋ- ಆಫ್ ಸೊಸೈಟಿಯ ಸದಸ್ಯ ರೋಹಿದಾಸ ಬಾನಾವಳಿ, ಕಾರವಾರ ತಾಲ್ಲೂಕು ಯಾಂತ್ರೀಕೃತ ನಾಡದೊಣಿ ಮೀನುಗಾರರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಕೋಡಾರಕರ, ಕಾರವಾರ ತಾಲೂಕು ಯಾಂತ್ರಿಕೃತ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ವಿಠ್ಠಲ ಹರಿಕಂತ್ರ ಹಾಜರಿದ್ದರು.