ಕಾರವಾರ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನಡೆಯುತ್ತಿರುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಸಮುದಾಯ ಆರೋಗ್ಯಾಧಿಕಾರಿಗಳನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಖಾಯಂಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವಿ ನಾಯ್ಕ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಸಮಾನ ಕೆಲಸಕ್ಕೆ ವೇತನ ನೀಡಬೇಕು ಹಾಗೂ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಧೋರಣೆ ವಿರೋಧಿಸಿ ನ. ೧೮ ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಎದುರುವು ಪ್ರತಿಭಟನೆ ನಡೆಸಲಾಗುವುದು ಎಂದರು. ಮಾರ್ಗಸೂಚಿ ಅನ್ವಯ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಕರ್ತವ್ಯಕ್ಕೆ ನಿಯೋಜನೆ ಮಾಡಬೇಕಾಗಿದೆ. ಆದರೆ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ದಿನನಿತ್ಯದ ಕರ್ತವ್ಯವನ್ನು ಹೊರತುಪಡಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇತರೆ ಕಾರ್ಯಗಳಲ್ಲಿ ತೊಡಗಿಸುವುದರ ಮೂಲಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ದಿನನಿತ್ಯದ ಚಟುವಟಿಕೆಗಳು ಹಾಗೂ ಕಾರ್ಯಗಳು ಕುಂಟಿತಗೊಳ್ಳುವಂತೆ ಮಾಡಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳ ಕಿರುಕುಳದಿಂದಾಗಿ ಸಮುದಾಯ ಆರೋಗ್ಯಾಧಿಕಾರಿಗಳು ನೊಂದಿದ್ದಾರೆ. ಕೆಲವರು ಪ್ರಾಣ ಬಿಟ್ಟರೆ ಮತ್ತೆ ಕೆಲವರು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆಗಳು ಸಾಕಷ್ಟಿವೆ ಎಂದು ಅವರು ತಿಳಿಸಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು ಉದ್ದೇಶಿತ ಯೋಜನೆಗೆ ಆಡಿ ಪಡಿಸುತ್ತಿದ್ದಾರೆ. ಯಾವ ಕಾರ್ಯಕ್ಕೆ ಸಮುದಾಯ ಆರೋಗ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆಯೋ ಅದೇ ಅದೇ ಕಾರ್ಯಚಟುವಟಿಕೆಗಳಲ್ಲಿ ಅವರನ್ನು ಮುಂದುವರಿಸಬೇಕು ಹಾಗೂ ಸಮುದಾಯ ಆರೋಗ್ಯ, ಅಧಿಕಾರಿಗಳ ಕುಂದು ಕೊರತೆಗಳನ್ನು ನಿವಾರಿಸಬೇಕು ಎಂದು ಮನವಿ ಮಾಡಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನದ ಆರೋಗ್ಯ ಸುರಕ್ಷತೆ ಚಟುವಟಿಕೆಗೆ ಅಡ್ಡಿಪಡಿಸಿ ಕೆಲವು ಜಿಲ್ಲೆಗಳಲ್ಲಿ ಬೇರೆ ಬೇರೆ ಕೆಲಸಕ್ಕೆ ನಿಯೋಜಿಸುವ ಬೇರೆ ವೃಂದದವರ ಕೆಲಸವನ್ನು ಸಮುದಾಯ ಆರೋಗ್ಯಾಧಿಕಾರಿಗಳ ಮೇಲೆ ಹೇರುವ ಮೂಲಕ ಅವರನ್ನು ತುಳಿಯುವ ವ್ಯವಸ್ಥಿತಿ ಪಿತೂರಿಗಳು ನಡೆಯುತ್ತಿವೆ ಎಂದು ಅವರು ನೋವು ವ್ಯಕ್ತಪಡಿಸಿದರು.
ಸಂಘದ ಕಿರಣ ಕುಮಾರ್ ನಾಯ್ಕ್, ವಿದ್ಯಾ, ಸಂದೀಪ್‌ಕುಮಾರ್. ನಾಗರತ್ನ ನಾಯ್ಕ, ಈರಪ್ಪ, ವಿರೇಶ್ ಮಡಿವಾಳ ಹಾಜರಿದ್ದರು.