ಕಾರವಾರ: ತಾಲೂಕಿನ ಗೋಟೆಗಾಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದ್ದು ಸಹ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಎಂಟು ದಿನಗಳಿಂದ ಗ್ರಾಮೀಣ ಪ್ರದೇಶವಾದ ಅಸ್ನೋಟಿ ಹಾಗೂ ಚಿತ್ತಾಕುಲಾ ಗ್ರಾಪಂ ಭಾಗದ ಜನರಿಗೆ ಕುಡಿಯುವ ನೀರು ಸೂಕ್ತ ರೀತಿಯಲ್ಲಿ ಪೂರೈಕೆಯಾಗುತ್ತಿಲ್ಲ.
ಗೋಟೆಗಾಳಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಅನೇಕ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಪ್ರತಿನಿತ್ಯ ನೀರು ಪೂರೈಕೆಯಾಗುತ್ತದೆ. ಅಲ್ಲದೆ, ಭಾಗದ ಜನ ಇದೇ ನೀರನ್ನು ನಂಬಿದ್ದಾರೆ. ಆದರೆ ಒಮ್ಮೊಮ್ಮೆ ಎರಡು ದಿನ, ವಾರಕ್ಕೆ ಒಮ್ಮೆ ನೀರು ಪೂರೈಕೆ ಆಗಿರುವ ನಿದರ್ಶನ ಸಹ ಇದೆ. ಸದ್ಯ ಅಸ್ನೋಟಿ ಹಾಗೂ ಚಿತ್ತಾಕುಲಾ ಗ್ರಾಪಂ ವ್ಯಾಪ್ತಿಯ ಜನರಿಗೆ ತಾಂತ್ರಿಕ ದೋಷದಿಂದ ನೀರು ಪೂರೈಕೆ ಕಳೆದ ಎಂಟು ದಿನಗಳಿಂದ ಸಂಪೂರ್ಣ ರೀತಿಯಲ್ಲಿ ಸ್ಥಗಿತವಾಗಿದೆ.
ಗೋಟೆಗಾಳಿಯಲ್ಲಿರುವ 110 ಎಚ್.ಪಿ. ಸಾಮರ್ಥ್ಯ ದ ಪಂಪ್ ಹೌಸ್ ಇದ್ದು ಇದಕ್ಕೆ 440 ವ್ಯಾಟಿನ ವಿದ್ಯುತ್ ಬೇಕು.ಆದರೆ ಕಳೆದ ಎಂಟು ದಿನಗಳಿಂದ 380 ಯಿಂದ 400 ವ್ಯಾಟ್ ವಿದ್ಯುತ್ ಪೂರೈಕೆ ಆಗುತ್ತಿದೆ. ಅದರಲ್ಲೂ ಪಂಪ್ ಹೌಸ್ ಯಂತ್ರ ಆರಂಭಿಸಿದರೆ, ವಿದ್ಯುತ್ ಸಾಮರ್ಥ್ಯ ಕಡಿಮೆ ಇದ್ದರಿಂದ ನೀರು ಸೆಳೆಯಲು ವಿಫಲವಾಗಿದೆ.ಯಂತ್ರ ಆರಂಭಿಸಿದರೆ, ವಿದ್ಯುತ್ ಸಾಮರ್ಥ್ಯ ಇಳಿಕೆಯಾಗುತ್ತಿದೆ. ಇದರಿಂದ ನೀರು ಪೂರೈಕೆ ಸಾಧ್ಯವಾಗದೆ, ಜನರು ತೊಂದರೆ ಪಡುವಂತಾಗಿದೆ.
ವಿದ್ಯುತ್ ಸಮಸ್ಯೆ ಇದ್ದರೂ ಸಹ ಜನರು ಗೋಟೆಗಾಳಿ ಬಹುಗ್ರಾಮ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುವಂತಾಗಿದೆ.