ಕಾರವಾರ: ಜಿಲ್ಲಾಧಿಕಾರಿ ಕಚೇರಿ ಎದುರಿಗಿನ ಮೇಲ್ಸೇತುವೆಗೆ ಮೇಜರ್ ರಾಮಾ ರಾಘೋಬಾ ರಾಣೆ ಅವರ ಹೆಸರಿಡುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಜನಶಕ್ತಿ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
ರಾಮಾ ರಾಘೋಬಾ ರಾಣೆಯವರು ಜನಿಸಿದ್ದು 1981, ಜೂ.26ರಲ್ಲಿ ಕಾರವಾರದ ಚೆಂಡಿಯಾ ಗ್ರಾಮದಲ್ಲಿ. ಸಾಮಾನ್ಯ ಸೈನಿಕನಾಗಿ ಸೇನೆ ಸೇರಿದ ಅವರು, ತಮ್ಮ ಕರ್ತವ್ಯ ನಿಷ್ಠೆಯಿಂದಾಗಿ ಕಮಿಶನ್ಸ್ ಅಧಿಕಾರಿಯಾಗಿ ಪದೋನ್ನತಿ ಪಡೆದರು. 1948ರಲ್ಲಿ ಬಾಂಬೆ ಇಂಜಿನಿಯರ್ಸ್ ಗ್ರೂಪ್ ನ ಸೆಕೆಂಡ್ ಲೆಫ್ಟಿನೆಂಟ್ ಆಗಿದ್ದ ರಾಣೆಯವರ 37ನೇ ಕಂಪನಿಯ ಒಂದು ತುಕಡಿಗೆ, ಭಾರತ- ಪಾಕಿಸ್ತಾನದ ಯುದ್ಧದಲ್ಲಿ ಶತ್ರು ಸೇನೆ ಹುಗಿದಿಟ್ಟ ಸ್ಫೋಟಕಗಳನ್ನು ತೆರವುಗೊಳಿಸುವ ಕಾರ್ಯ ನೀಡಲಾಗಿತ್ತು.
ಕಾರ್ಯಾಚರಣೆ ಪ್ರದೇಶ ಗುಡ್ಡಗಾಡಿನ ದುರ್ಗಮ ಪ್ರವೇಶವಾಗಿತ್ತು. ರಾಣೆಯವರ ತುಕಡಿ ಹುಗಿದಿಟ್ಟ ಸ್ಫೋಟಕಗಳನ್ನು ಸುರಕ್ಷಿತವಾಗಿ ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದ ವೇಳೆ ತುಕಡಿಯ ಇಬ್ಬರು ಸೈನಿಕರು ಶತ್ರುದಾಳಿಗೆ ವೀರಮರಣವನ್ನಪ್ಪಿ, ಸ್ವತಃ ರಾಣೆಯವರೂ ಗಾಯಗೊಂಡರು. ಆದರೂ ಎದೆಗುಂದದೆ ಶತ್ರುಗಳ ದಾಳಿಯ ಮಧ್ಯೆಯೇ ಹುಗಿದಿಟ್ಟ ಸ್ಪೋಟಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಸತತ ಮೂರು ದಿನಗಳ ಕಾಲ ಮುಂದುವರೆಸಿದ್ದರು. ಕರ್ತವ್ಯದ ಕರೆಯನ್ನು ಮೀರಿ, ಜೀವದ ಹಂಗು ತೊರೆದು ಅಪ್ರತಿಮ ಸಾಹಸ ಹಾಗೂ ಶೌರ್ಯದಿಂದ ತಮ್ಮ ತುಕಡಿಯನ್ನು ಹುರಿದುಂಬಿಸಿ 4ನೇ ಡೊಗ್ರಾ ವೇಗವಾಗಿ ಮುನ್ನುಗ್ಗುವಂತೆ ಮಾಡಿದ ರಾಣೆಯವರಿಗೆ ದೇಶದ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿ ‘ಪರಮವೀರ ಚಕ್ರ’ ಪದಕವನ್ನು ನೀಡಲಾಯಿತು. ರಾಣೆಯವರು 1968ರ ವರೆವಿಗೂ ರಾಣೆ ಸೇನೆಯ ಸೇವೆಯಲ್ಲಿದ್ದು ಮೇಜರ್ ಆಗಿ ನಿವೃತ್ತಿ ಹೊಂದಿದರು. ‘ಪರಮವೀರ ಚಕ್ರ ಪದಕ’ ಪಡೆದ ನಂತರ ಕೂಡ ರಾಣಿಯವರಿಗೆ ಐದು ಬಾರಿ ಶ್ಲಾಘನಾ ಪತ್ರ (ಮೆನ್ಶನ್ ಇನ್ ಡಿಸ್ಪ್ಯಾಚ್) ನೀಡಲಾಯಿತು. ಇದು ಅವರ ಸೇವಾ ತತ್ಪರತೆಯನ್ನು ಎತ್ತಿ ತೋರಿಸುತ್ತದೆ. 10ನೇ ಜುಲೈ 1994ರಂದು ಕರ್ನಾಟಕದ ಈ ಏಕೈಕ ‘ಪರಮವೀರ ಚಕ್ರ ಪದಕ’ ಸಮ್ಮಾನಿತ ರಾಮ ರಾಘೋಬ ರಾಣೆಯವರು ಇಹಲೋಕ ತ್ಯಜಿಸಿದರು. ಇಂಥ ಸಾಹಸಿ, ಶೌರ್ಯದ ಇವರ ಪುತ್ಥಳಿಯನ್ನು ಮಾತ್ರ ಅವರ ಹುಟ್ಟೂರು ಕಾರವಾರದಲ್ಲಿ ಐಎನ್ಎಸ್ ಚಾಪಲ್ ವಾರ್ಷಿಪ್ ಮ್ಯೂಸಿಯಂ ಬಳಿ ಸ್ಥಾಪಿಸಲಾಯಿತೇ ವಿನಃ ಬೇರೇನೂ ಗೌರವಗಳು ಅವರಿಗೆ ಇಲ್ಲಿ ಸಿಕ್ಕಿಲ್ಲ. ಕೆಲವು ವಿಶೇಷ ದಿನಗಳಂದು ಅವರನ್ನು ಸ್ಮರಿಸಿ, ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುತ್ತದೆ. ಆದರೆ ಇಂಥವರ ಹೆಸರು ಚಿರಸ್ಥಾಯಿಯಾಗಿರಬೇಕು. ದಿನವೂ ಜನತೆ ಇವರನ್ನ ನೆನೆಯುವಂತಿರಬೇಕು. ಆ ಮೂಲಕ ಅವರ ಶೌರ್ಯ, ಸಾಹಸ ಯುವ ಪೀಳಿಗೆಗೆ ಮಾದರಿಯಾಗಬೇಕು. ಈ ನಿಟ್ಟಿನಲ್ಲಿ ಕಾರವಾರದ ಜಿಲ್ಲಾಧಿಕಾರಿ ಕಚೇರಿಯ ಎದುರಿಗಿನ ಮೇಲ್ಸೇತುವೆ (ಫ್ಲೈ ಓವರ್) ಗೆ ‘ಮೇಜರ್ ರಾಮ ರಾಘೋಬ ರಾಣೆ ಫ್ಲೈಓವರ್’ ಎಂದು ನಾಮಕರಣ ಮಾಡುವ ಮೂಲಕ ಜಿಲ್ಲಾಡಳಿತ ಅವರಿಗೆ ಗೌರವ ಸಲ್ಲಿಸಬೇಕಿದೆ.
ಅವರು ಕಾರವಾರದಲ್ಲಿ ಜನಿಸಿದ್ದರೂ ಕರ್ತವ್ಯದ ನಿಮಿತ್ತ ಪುಣೆಯಲ್ಲಿ ವಾಸವಿದ್ದರು. ಪುಣೆಯಲ್ಲಿ ಸರ್ಕಲ್ ಹಾಗೂ ರಸ್ತೆಗಳಿಗೆ ಅವರ ಹೆಸರಿಡಲಾಗಿದೆ. ಇತ್ತೀಚಿಗೆ ಕೇಂದ್ರ ಸರ್ಕಾರ ಅಂಡಮಾನ್ ಮತ್ತು ನಿಕೋಬಾರ್ ನ ದ್ವೀಪವೊಂದಕ್ಕೂ ಅವರ ಹೆಸರಿಟ್ಟು ಗೌರವ ಸಲ್ಲಿಸಿದೆ. ಹೀಗಿರುವಾಗ ಹುಟ್ಟೂರಿನಲ್ಲಿ ಅವರ ಹೆಸರು ಎಲ್ಲಿಯೂ ಇಲ್ಲದಿರುವುದು ಅವರಿಗೆ ಅಗೌರವ ಸಲ್ಲಿಸಿದಂತೆ ಹಾಗೂ ಅವರನ್ನ ಯುವಜನತೆ ಮರೆಯುವಂತಾಗಲಿದೆ. ಹೀಗಾಗಿ ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಂಡು, ಮೇಲ್ಕಾಣಿಸಿದ ಬೇಡಿಕೆಯನ್ನು ಈಡೇರಿಸಿ ರಾಣೆಯವರಿಗೆ ಗೌರವ ಸಲ್ಲಿಸುವ ಕಾರ್ಯವಾಗಬೇಕಿದೆ ಎಂದು ಆಶಿಸುತ್ತೇವೆ. ಜಿಲ್ಲಾಧಿಕಾರಿ ಕಚೇರಿಯ ಎದುರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಲು ಜಿಲ್ಲಾಡಳಿತ ಮುಂದಾಗಿರುವುದು ಶ್ಲಾಘನೀಯ ಕಾರ್ಯ ಎಂದರು. ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ಮನವಿ ಸ್ವೀಕರಿಸಿದರು. ಮನವಿ ಸಲ್ಲಿಸುವ ನಿಯೋಗದಲ್ಲಿ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಹಾಗೂ ಇನ್ನಿತರರು ಇದ್ದರು.