ಕಾರವಾರ: ದೇವರು ಕನಸಿನಲ್ಲಿ ಬಂದು ಹೇಳಿದ್ದಾಳೆ ಎಂಬ ಕಾರಣ ಹೇಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಬಾವಿ ಅಗೆದ ನಾಲ್ವರು ಖದೀಮರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಶಿರವಾಡ ಗ್ರಾಪಂ ವ್ಯಾಪ್ತಿಯ ನಾರಗೇರಿಯ ಬೇಳೂರು ರಸ್ತೆಯಲ್ಲಿ ರವಿವಾರ ನಡೆದಿದೆ.
ರಾಣೆಬೆನ್ನೂರು ಮೂಲದ ಪ್ರಸ್ತುತ ಶಿರವಾಡದ ನಿವಾಸಿ ಹಿದಾಯತ್ ಅಬ್ದುಲ್ ಘನಿ, ರಸ್ತುಂ ರಜಾಕ್ ಸಾಬ್, ಉತ್ತರ ಪ್ರದೇಶ ಮೂಲದವರಾಗಿದ್ದು ಹಾಲಿ ಕಾರವಾರದ ನಿವಾಸಿಗಳಾದ ಹರ್ಷದ ಅಲಿ ಅನ್ಸಾರಿ ಹಾಗೂ ಸರ್ಫರಾಜ್ ಅಬೀಬುಲ್ಲಾ ಸಲ್ಮಾನಿ ಬಂಧಿತ ಆರೋಪಿಗಳಾಗಿದ್ದರು. ಕೆಲವರು ಶಿರವಾಡದ ಬೇಳೂರು ರಸ್ತೆಯ ಬಳಿ ಅರಣ್ಯದಲ್ಲಿ ಅಗೆಯುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಬಳಿಕ ಪರಿಶೀಲನೆ ನಡೆಸಿದಾಗ ಸುಮಾರು 15 ಅಡಿಗೂ ಹೆಚ್ಚು ಬಾವಿ ತೆಗೆದಿರುವುದು ಕಂಡು ಬಂದಿದೆ. ಅಲ್ಲದೇ ಬಾವಿಯ ಮೇಲ್ಭಾಗದಲ್ಲಿ ಕಲ್ಲುಗಳಿಗೆ ಕುಂಕುಮ, ಹೂವುಗಳು, ಮುಳ್ಳು ಹಂದಿಯ ಮುಳ್ಳು, ಪಕ್ಷಿಯ ಗರಿ ಮೊದಲಾದ ವಸ್ತುಗಳನ್ನನು ಇರಿಸಿ ಪೂಜೆ ಸಲ್ಲಿಸಿರುವುದೂ ಕಂಡುಬಂದಿದೆ.
ತಕ್ಷಣ ನಾಲ್ವರನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರಕರಣದ ಪ್ರಮುಖ ಆರೋಪಿ ಹಿದಾಯತ್ ಹೇಳಿದ ಮಾತುಗಳು ಅಚ್ಚರಿಗೆ ಕಾರಣವಾದವು. ತನಗೆ ಶಿರಸಿ ಮಾರಿಯಮ್ಮ ಕನಸಲ್ಲಿ ಬಂದು ಇಲ್ಲಿ ಬಾವಿ ತೆಗೆದು, ಈ ಬಾವಿಯ ನೀರಿನಿಂದ ಅಭಿಷೇಕ ಮಾಡಲು ತಿಳಿಸಿದ್ದಳು. ಇನ್ನೊಂದು ಅಡಿ ಹೋಗಿದ್ದರೆ ನೀರು ಬರುತ್ತಿತ್ತು. ಮುಂದಿನ ಅಮವಾಸ್ಯೆಯಂದು ಪೂಜೆ ಸಲ್ಲಿಸುವುದಿತ್ತು. ಹೀಗಾಗಿ ಬಾವಿ ತೆಗೆದಿದ್ದೇವೆ, ನಾವೇನೂ ತಪ್ಪು ಮಾಡಿಲ್ಲ ಎಂದಿದ್ದಾನೆ.
ಆದರೆ ಅಲ್ಲಿ ನಡೆಸಿರುವ ಪೂಜೆಯನ್ನು ಗಮನಿಸಿದಾಗ ಪ್ರಾಥಮಿಕ ತನಿಖೆಯಲ್ಲಿ ನಿಧಿ ಆಸೆಗಾಗಿಯೇ ಬಾವಿ ತೆಗೆದಿರುವುದಾಗಿ ಸಂಶಯ ವ್ಯಕ್ತವಾಗಿದೆ.
ನಾಲ್ವರನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿತರಿಂದ ಒಂದು ಬೈಕ್, ನಾಲ್ಕು ಮೊಬೈಲ್, ಪೂಜೆಗೆ ಬಳಸಿದ್ದ ವಸ್ತುಗಳು, ಬಾವಿ ತೆಗೆಯಲು ಬಳಸಿದ್ದ ಹಾರೆ, ಪಿಕಾಸು, ಹಗ್ಗ ಇತ್ಯಾದಿ ಸಲಕರಣೆಗಳನ್ನ ಜಪ್ತಿಪಡಿಸಿಕೊಂಡಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇರೆ ಆರೋಪಿಗಳು ಇರುವ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಡಿಸಿಎಫ್ ಡಾ. ಪ್ರಶಾಂತ ಕುಮಾರ ಕೆ.ಸಿ., ಎಸಿಎಫ್ ಜಯೇಶ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ, ಉಪ ವಲಯ ಅರಣ್ಯಾಧಿಕಾರಿಗಳಾದ ರೂಪಾ ತಾಮಸೆ, ನವೀನ ಶೆಟ್ಟಿ, ಅರಣ್ಯ ರಕ್ಷಕರಾದ ವೀಣಾ ದೇವಾಡಿಗ, ಸಂಜೀವ ಅಸ್ನೋಟಿಕರ, ಅರಣ್ಯ ವೀಕ್ಷಕರಾದ ಮಧುಕರ ಗುನಗಿ, ದೇವಿದಾಸ ಗುನಗಿ, ಶಶಿಕಾಂತ ಗುನಗಿ, ವಾಹನ ಚಾಲಕ ಶಶಿಕಾಂತ ಗೋವೇಕರ ಪಾಲ್ಗೊಂಡಿದ್ದರು.