ಕಾರವಾರ: ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲು ಯುವಜನರನ್ನು ಬಳಸಿಕೊಳ್ಳಬೇಕಿದೆ. ಅದಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಯುವ ಘಟಕವು ವಿವೇಕಾನಂದರ ಜಯಂತಿಯಂದು ಜ. ೧೨ ರಂದು ದಾವಣೆಗೆರೆಯಲ್ಲಿ ರಾಜ್ಯಮಟ್ಟದ ಯುವ ಸಮಾವೇಶ ಹಮ್ಮಿಕೊಂಡಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಸಂಚಾಲಕ ವಿನಾಯಕ ಮಂಗೇಶ ನಾಯ್ಕ ತಿಳಿಸಿದರು.
ಅವರು ಮಂಗಳವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಿದ್ದರು. ರಾಜಕೀಯ ಪ್ರಾತಿನಿಧ್ಯ ಯುವ ಜನರಿಗೆ, ಯುವತಿಯರಿಗೆ ಸಿಗುತ್ತಿಲ್ಲ ಎಂದರು.
ಹಾಗೆಯೇ ಜ. ೯ ರಿಂದ ೧೦ ರವರೆಗೆ ಜಿಲ್ಲೆಯಲ್ಲೆ ಭಟ್ಕಳದಿಂದ ಕಾರವಾರದವರೆಗೆ ಕರುನಾಡ ಕಟ್ಟೊಣ ಎಂದು ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳ ಸಂಚಾರ ನಡೆಯಲಿದೆ.
ಪ್ರಸ್ತುತ ರಾಜಕೀಯ ಪಕ್ಷಗಳಲ್ಲಿ ಅದೇ ಭ್ರಷ್ಟ ವ್ಯವಸ್ಥೆಯ ಹಳೇ ಮುಖಗಳು ಇದ್ದು, ಹಾಲಿ-ಮಾಜಿ ರಾಜಕೀಯ ನಾಯಕರುಗಳ ಕುಡಿಗಳಿಗೆ ಮಾತ್ರ ಅವಕಾಶ ಸಿಗುತ್ತದೆ. ದೇಶ ಮತ್ತು ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳಿಗೆ, ಯುವ ಜನರು ಎದುರಿಸುತ್ತಿರುವ ನಾನಾ ಸಮಸ್ಯೆಗಳಿಗೆ ಯುವ ಜನರು ರಾಜಕೀಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ಅತೀ ಮುಖ್ಯವಾಗಿದೆ.
ಈ ನಿಟ್ಟಿನಲ್ಲಿ ರಾಜ್ಯದ ಯುವ ಜನತೆಗೆ ಕರ್ನಾಟಕ ರಾಷ್ಟç ಸಮಿತಿ ಪಕ್ಷವು ಹೆಚ್ಚಿನ ಅವಕಾಶ ಕಲ್ಪಿಸುತ್ತಿದ್ದು, ಈ ಅವಕಾಶದ ಸದುಪಯೋಗ ಪಡೆದು ರಾಜ್ಯದ ಯುವ ಜನರು ನಾಡನ್ನು ಕಟ್ಟಲು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿನಾಯಕ ನಾಯ್ಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪದಾಧಿಕಾರಿಗಳು ಪ್ರಸಾದ ಭೋವಿ, ಅನಿತಾ ಹರಿಕಂತ್ರ, ಪ್ರಕಾಶ ಭೋವಿ, ನಿತ್ಯಾನಂದ ಉಳ್ವೇಕರ ಉಪಸ್ಥಿತರಿದ್ದರು.