ಕಾರವಾರ: ಕುಮಟಾ ತಾಲೂಕಿನ ಅಳೇಕೊಡಿಯ ಗುಜರಿ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಎಕರೆಯಷ್ಟು ಪ್ರದೇಶದಲ್ಲಿ ಬೆಂಕಿ ಜ್ವಾಲೆ ಆವರಿಸಿಕೊಂಡು ಆತಂಕ ಸೃಷ್ಟಿಸಿದೆ.
ಕುಮಟಾ ತಾಲೂಕಿನ ಅಳ್ವೆಕೋಡಿಯಲ್ಲಿರುವ ಬಾಷಾ ಶೇಖ್ ಎಂಬುವವರ ಮಾಲೀಕತ್ವದ ಗುಜರಿ ಅಂಗಡಿಯೊಳಕ್ಕೆ ಬೆಂಕಿ ತಗಲಿ ಗುಜರಿ ಸಾಮಗ್ರಿಗಳಿಗೆ ಆವರಿಸಿದೆ. ಎರಡು ಎಕರೆಯಷ್ಟು ಪ್ರದೇಶದಲ್ಲಿ ಗುಜರಿ ಸಾಮಗ್ರಿಗಳು ಸಂಗ್ರಹಿಸಿಡಲಾಗಿದ್ದರಿಂದ ಎಕರೆಯಷ್ಟು ಪದೇಶದಲ್ಲಿ ಬೆಂಕಿಯ ಜ್ವಾಲೆ ಆವರಿಸಿ, ಕಾಡ್ತಿಚ್ಚಿನಂತೆ ಹರಡಿದೆ.
ಬೆಂಕಿ ನಂದಿಸಲು ಕುಮಟಾ, ಹೊನ್ನಾವರ ಅಂಕೋಲಾ, ಭಟ್ಕಳ ಹಾಗೂ ಕಾರವಾರ ಅಗ್ನಿಶಾಮಕ ಸಿಬ್ಬಂದಿ ಸತತ 6 ತಾಸುಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಸಿದರೂ ಬೆಂಕಿ ಹಬ್ಬುತ್ತಿದ್ದರಿಂದ ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ. ಕೆಲ ಸ್ಥಳೀಯರು ಮನೆ ಖಾಲಿ ಮಾಡಿ, ಅಲ್ಲಿಂದ ಸ್ಥಳಾಂತರಗೊಂಡ ಘಟನೆಯೂ ನಡೆದಿದೆ.
ಸ್ಥಳಿಯರು ಕೂಡ ತಮ್ಮ ತಮ್ಮ ಮನೆಯಿಂದ ನೀರು ತಂದು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಗುಜರಿ ಗೋದಾಮಿನಲ್ಲಿ ಭಾರಿ ಪ್ರಮಾಣದಲ್ಲಿ ಕಚ್ಚಾವಸ್ತುಗಳು ಸಂಗ್ರಹಿಸಿದ್ದರಿಂದ ಬೆಂಕಿಯ ವ್ಯಾಪ್ತಿ ಹೆಚ್ಚಾಗಿದೆ. ಅಗ್ನಿಶಾಮಕ ವಾಹನಗಳು ಒಳಗೆ ಬರಲು ದಾರಿ ಇಲ್ಲದೇ ಸಿಬ್ಬಂದಿ ಹರಸಾಹಸ ಪಡುವಂತಾಯಿತು.
ಗುಜರಿ ಸಾಮಗ್ರಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.