ಕಾರವಾರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ 2023-24 ನೇ ಸಾಲಿನ ಬಜೆಟ್ ಅಭಿವೃದ್ಧಿಪರವಾಗಿದ್ದು, ಎಲ್ಲಾ ಕ್ಷೇತ್ರಗಳಿಗೆ ಸಮಾನ ಆದ್ಯತೆ ನೀಡಲಾಗಿದೆ. ಶ್ರೀ ಸಾಮಾನ್ಯನಿಂದ ಹಿಡಿದು ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿರುವ ಬಜೆಟ್ ಇದಾಗಿದೆ ಎಂದು ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಜೆಟ್‌ನಲ್ಲಿ ಕೃಷಿ, ಮೀನುಗಾರಿಕೆ, ಕಾರ್ಮಿಕರಿಗೆ ಕೈಗಾರಿಕೆ, ತಂತ್ರಜ್ಞಾನ , ಆರೋಗ್ಯ, ಶಿಕ್ಷಣ ಹೀಗೆ ಹತ್ತು ಹಲವು ಕ್ಷೇತ್ರಗಳಿಗೆ ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಆದಾಯ ತೆರಿಗೆ ಮಿತಿಯನ್ನು 7 ಲಕ್ಷಕ್ಕೆ ಏರಿಸುವ ಕ್ರಾಂತಿಕಾರಕ ಘೋಷಣೆ ಮಾಡಲಾಗಿದೆ. ಇದು ಮಧ್ಯಮ ವರ್ಗದವರಿಗೆ ಸಾಕಷ್ಟು ಅನುಕೂಲವಾಗಲಿದೆ.
ಡಿಜಿಟಲ್ ಶಿಕ್ಷಣಕ್ಕೆ ವೇಗ ನೀಡುವ ಯೋಜನೆಗಳನ್ನು ಘೋಷಣೆ ಮಾಡಲಾಗಿದ್ದು, ಇದು ಮುಂಬರುವ ಸ್ಪರ್ಧಾತ್ಮಕ ದಿನಗಳಿಗೆ ನಮ್ಮ ಮಕ್ಕಳನ್ನು ತಯಾರು ಮಾಡಲು ಅನುಕೂಲವಾಗಲಿದೆ. ಸಣ್ಣ ಉದ್ದಿಮೆ ಸಹಾಯವಾಗುವ ಯೋಜನೆಯನ್ನು ಘೋಷಣೆ ಮಾಡಲಾಗಿದ್ದು, ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಮಹಿಳೆಯರು ಹಾಗೂ ಶ್ರಮಿಕರನ್ನು ಗಮನದಲ್ಲಿಟ್ಟುಕೊಂಡು ನಿರ್ಮಲಾ ಸೀತಾರಾಮನ್ ಅವರು ಹೊಸ ಕ್ರಮಗಳನ್ನು ಪ್ರಕಟಿಸಿದ್ದಾರೆ. ಒಟ್ಟಾರೆ ಇದೊಂದು ಸರ್ವಸ್ಪರ್ಶಿ ಸರ್ವವ್ಯಾಪಿ ಮುಂಗಡಪತ್ರವಾಗಿದ್ದು, ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ. ಬಡವರು ಹಾಗೂ ಮಧ್ಯಮವರ್ಗದವರಿಗೆ ಸಮಾನ ಕೊಡುಗೆ ನೀಡಿದೆ.
ಮುಂದಿನ ಹಲವಾರು ವರ್ಷಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್ ಇದಾಗಿದೆ. ಭದ್ರಾ ಮೇಲ್ಡಂಡೆಗೆ ಯೋಜನೆಗೆ 5300 ಕೋಟಿ ನೀಡುವ ಮೂಲಕ ರಾಜ್ಯಕ್ಕೂ ಕೊಡುಗೆ ನೀಡಲಾಗಿದೆ. ಇದೊಂದು ಅಭೂತಪೂರ್ವ ಕೊಡುಗೆಯಾಗಿದ್ದು, ಲಕ್ಷಾಂತರ ರೈತರಿಗೆ ಸಹಾಯವಾಗಲಿದೆ ಎಂದರು.