ಕಾರವಾರ: ಮಾಜಾಳಿಯ ಪಿಡಿಒ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ನಗರದ ಜಿಪಂ ಕಚೇರಿಯಲ್ಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಮಾಜಿ ಶಾಸಕ ಸತೀಶ್ ಸೈಲ್ ನಡುವೆ ಮಾತಿಗೆ ಮಾತು ಬೆಳೆದು, ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ದೂರು ಪ್ರತಿ ದೂರು ಶುಕ್ರವಾರ ದಾಖಲಾಗಿದೆ.
ಮಾಜಾಳಿ ಗ್ರಾಪಂ ಪಿಡಿಒ ಸಾಧನಾ ಚಂಡೇಕರ್ ಅವರನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಶಿರವಾಡ ಪಿಡಿಒ ಅರುಣಾ ಅವರನ್ನು ನಿಯುಕ್ತಿ ಮಾಡಲಾಗಿತ್ತು. ಸ್ಥಳೀಯರೊಂದಿಗೆ ವ್ಯವಹರಿಸಲು ಅರುಣಾ ಅವರಿಗೆ ಕೊಂಕಣಿ ಬಾರದೇ ಇರುವ ಹಿನ್ನೆಲೆಯಲ್ಲಿ ಅವರನ್ನು ಬದಲಿಸಬೇಕು ಎಂದು ಪಂಚಾಯಿತಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರು ಮಾಜಿ ಶಾಸಕ ಸತೀಶ್ ಸೈಲ್ ಅವರೊಂದಿಗೆ ಜಿಲ್ಲಾ ಪಂಚಾಯಿತಿ ಕಚೇರಿ ತೆರಳಿ ಸಿಇಓ ಅವರೊಂದಿಗೆ ಚರ್ಚೆ ನಡೆಸುತ್ತಿದ್ದರು.
ಜಿಲ್ಲಾ ಪಂಚಾಯಿತಿಯಲ್ಲಿ ನಿಗದಿಯಾಗಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಆಗಮಿಸಿದ್ದ ಹಿನ್ನೆಲೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರೂ ಜಿಲ್ಲಾ ಪಂಚಾಯಿತಿಗೆ ಬಂದಿದ್ದರು. ಶಾಸಕರು ಬಂದ ಹಿನ್ನೆಲೆಯಲ್ಲಿ ಸಿಇಓ ಈಶ್ವರ ಖಂಡೂ ಅವರು ಶಿಷ್ಟಾಚಾರದಂತೆ ಶಾಸಕರನ್ನು ಬರಮಾಡಿಕೊಳ್ಳಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಸಿಇಓ ಅವರು ತಮ್ಮ ಕಡೆಗಣಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಪಿಡಿಓ ವಿಷಯ ಚರ್ಚೆಗೆ ಬಂದಿದೆ. ಚರ್ಚೆ ವಿಸ್ತಾರವಾಗುತ್ತಿದ್ದಂತೆಯೇ ಶಾಸಕಿ ರೂಪಾಲಿ ನಾಯ್ಕ ಮತ್ತು ಮಾಜಿ ಶಾಸಕ ಸತೀಶ್ ಸೈಲ್ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಸದ್ಯ ಪ್ರಕರಣ ಪೊಲೀಸ್ ಠಾಣೆಯಲ್ಲಿದೆ.