ಕಾರವಾರ: ಕೋವಿಡ್ ಹಾಗೂ ಇತರ ಕಾರಣಗಳಿಂದ ಕೆಲವು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ತಾಲೂಕಿನ ಗುನಗಿ ಸಮಾಜದವರ ಸುಗ್ಗಿ ಕುಣಿತವು ಈ ವರ್ಷ ಮತ್ತೆ ಸಂಭ್ರಮದಿಂದ ಆರಂಭಿಸಲಾಗಿದೆ.
ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರದರ್ಶಿಸಲಾಗುವ ಗುನಗಿ ಸಮುದಾಯದವರ ಈ ಸುಗ್ಗಿ ಕುಣಿತಕ್ಕೆ ಹಲವಾರು ದಶಕಗಳ ಇತಿಹಾಸವಿದೆ. ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ತಾಲ್ಲೂಕಿನ ಚೆಂಡಿಯಾ ಗ್ರಾಮದವರ ಸುಗ್ಗಿ ಕುಣಿತದ ತಂಡವು ಈ ಬಾರಿ ಮತ್ತೆ ಕೋಲಾಟ, ತುರಾಯಿ, ವಾದ್ಯಗಳ ಸಂಭ್ರಮದೊಂದಿಗೆ ಊರೂರು ಸಂಚರಿಸುತ್ತಿದೆ. ಹೋಳಿ ಹಬ್ಬದ 9 ದಿನಗಳ ಹಿಂದಿನಿಂದ ಆರಂಭಿಸಲಾಗುವ ಸುಗ್ಗಿ ಕುಣಿತವನ್ನು ಹೋಳಿ ಹುಣ್ಣಿಮೆಯಂದು ಸ್ವಂತ ಗ್ರಾಮದಲ್ಲಿ ಆಡುವ ಮೂಲಕ ಸಂಪನ್ನಗೊಳ್ಳುತ್ತದೆ. ಆರಂಭದ ದಿನ ಶಾಸಕಿ ರೂಪಾಲಿ ನಾಯ್ಕ ಅವರು ನಮ್ಮ ಸುಗ್ಗಿ ಕುಣಿತದ ತಂಡಕ್ಕೆ ಚಾಲನೆಯನ್ನು ನೀಡಿದ್ದಾರೆ ಎಂದು ಚೆಂಡಿಯಾದ ಸುಗ್ಗಿ ಕುಣಿತದ ಕಲಾವಿದರು ತಿಳಿಸಿದರು.
ತಾಲ್ಲೂಕಿನ ಚೆಂಡಿಯಾ, ಅರ್ಗಾ, ಕೋಡಾರ, ಬಿಣಗಾ ಗ್ರಾಮಗಳಲ್ಲಿ ಗುನಗಿ ಸಮಾಜದವರ ಮನೆ ಮನೆಗೆ ತೆರಳಿ ಸುಗ್ಗಿ ಕುಣಿತ ಪ್ರದರ್ಶಿಸಲಾಗಿದೆ. ಸದ್ಯ ಕಾರವಾರ ನಗರಕ್ಕೆ ತಂಡ ಆಗಮಿಸಿದ್ದು ಇಲ್ಲಿನ ಗುರುಮಠದಲ್ಲಿ ಪ್ರದರ್ಶನ ನೀಡಲಾಯಿತು. ಗುನಗಿ ಸಮಾಜದವರ ಹಾಗೂ ಇನ್ನಿತರರ ಮನೆಗಳಿಗೂ ತೆರಳಿ ಸುಗ್ಗಿ ಕುಣಿತ ಆಡಲಿದ್ದೇವೆ ಎಂದು ಅವರು ಮಾಹಿತಿ ನೀಡಿದರು. ಸಮಾಜದ ಕುಳಾವಿಗಳು, ಕೋಲಕಾರರು ಸೇರಿದಂತೆ ಸಮಾಜದ ಪ್ರಮುಖರ ಸಮ್ಮುಖದಲ್ಲಿ ಆರಂಭವಾಗುವ ಈ ಸುಗ್ಗಿಗೆ ಎಲ್ಲ ಗ್ರಾಮದವರೂ ಸಹಕರಿಸುತ್ತಾರೆ.
ಹೋಳಿ ಹಬ್ಬದ 9 ದಿನ ಮೊದಲು ಹೊರಟ ಕಲಾವಿದರು ಮುಗಿಯುವವರೆಗೂ ಕಾಲಿಗೆ ಚಪ್ಪಲಿಯನ್ನು ಧರಿಸುವುದಿಲ್ಲ. ಈ ಮಧ್ಯ ತಮ್ಮ ಮನೆಗೂ ಹೋಗುವುದಿಲ್ಲ, ಸ್ನಾನವನ್ನೂ ಮಾಡುವುದಿಲ್ಲ. ಕೊನೆಯದಿನ ಪೂಜೆ ಸಲ್ಲಿಸಿ ಸಮುದ್ರ ಸ್ನಾನ ಮಾಡಿ ತಮ್ಮ ಮನೆಗೆ ಹಿಂದಿರುಗುತ್ತೇವೆ. ಊರೂರಿಗೆ ತೆರಳಿದ ವೇಳೆ ಅಲ್ಲಿಯೇ ಊಟದ ವ್ಯವಸ್ಥೆಯನ್ನು ಹಾಗೂ ರಾತ್ರಿ ವಸತಿ ವ್ಯವಸ್ಥೆಯನ್ನು ಮಾಡಿರುತ್ತಾರೆ ಎಂದು ಇನ್ನೋರ್ವ ಕಲಾವಿದರು ತಿಳಿಸಿದರು.
ಒಟ್ಟಿನಲ್ಲಿ ಧರ್ಮ, ಸಂಸ್ಕೃತಿಯ ರಕ್ಷಣೆಗಾಗಿ ಜೊತೆಗೆ ಮನರಂಜನೆಯ ದೃಷ್ಟಿಯಿಂದ ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಯವರೂ ಉಳಿಸಿ, ಬೆಳೆಸಿಕೊಂಡು ಹೋಗುವಲ್ಲಿ ಈ ಸುಗ್ಗಿ ಕುಣಿತದಂತಹ ಪದ್ಧತಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಸದಾ ಮೊಬೈಲ್, ಟಿವಿ, ವಿಡಿಯೋ ಗೇಮ್ ಎಂದು ಬ್ಯೂಸಿಯಾಗಿರುವ ಮನಸ್ಸುಗಳಿಗೆ ನಮ್ಮ ಹಳೆಯ ಸಂಪ್ರದಾಯಗಳ ಮನರಂಜನೆಗಳು ಪರಿಣಾಮಕಾರಿಯಾಗಿರುತ್ತವೆ ಹಾಗೂ ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗುತ್ತವೆ ಎನ್ನುವುದು ಜನರ ಅನಿಸಿಕೆಯಾಗಿದೆ.