ಕಾರವಾರ: ಬೈತಖೋಲ ಮೀನುಗಾರಿಕಾ ಬಂದರಿನ ಜಟ್ಟಿಯಲ್ಲಿ ತುಂಬಿಕೊಂಡಿದ್ದ ಹೂಳು ತೆರುವು ಮಾಡಲು ಕ್ರಮಕೈಗೊಳ್ಳಲಾಗಿದೆ. ಇದರಿಂದ ಮೀನುಗಾರರು ಅನುಭವಿಸುತ್ತಿದ್ದ ತೊಂದರೆ ಬಗೆಹರಿಯಲಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಬೈತಖೋಲ ಮೀನುಗಾರಿಕೆ ಬಂದರಿನಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬೈತಖೋಲ ಮೀನುಗಾರಿಕೆ ಬಂದರಿನಲ್ಲಿರುವ ಮೀನುಗಾರಿಕೆ ಜಟ್ಟಿಯಲ್ಲಿ ಹೂಳು ತುಂಬಿಕೊಂಡಿದ್ದರಿಂದ ಬೋಟ್ನವರು ತುಂಬಾ ಸಮಸ್ಯೆ ಎದುರಿಸುತ್ತಿದ್ದರು. 3.50 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ನಡೆಯಲಿದ್ದು, ಹೂಳಿನ ಸಮಸ್ಯೆ ನಿವಾರಣೆಯಾಗಲಿದೆ ಎಂದರು.
ಹೂಳೆತ್ತುವ ಕಾಮಗಾರಿಯೊಂದಿಗೆ ರ್ಯಾಂಪ್ ನಿರ್ಮಾಣ, ಮೀನುಗಾರಿಕೆ ಬಂದರಿನ ಸುತ್ತಮುತ್ತ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಾಣ, ಮೀನು ಒಣಗಿಸುವ ಪ್ಲಾಟ್ಫಾರ್ಮ್ ನಿರ್ಮಾಣ ಕಾಮಗಾರಿಯೂ ಇಲ್ಲಿ ನಡೆಯಲಿದೆ ಎಂದು ರೂಪಾಲಿ ತಿಳಿಸಿದರು. ಮೀನುಗಾರಿಕೆಗೆ ಸಂಬಂಧಿಸಂತೆ ಹಿಂದೆ ರಾಜ್ಯ ಸರ್ಕಾರ ಮತ್ತು ಮೀನುಗಾರಿಕೆಗೆ ಪ್ರತ್ಯೇಕ ಇಲಾಖೆ ಹೊಂದಿತ್ತು. ಆದರೆ, ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಆಡಳಿತಕ್ಕೆ ಬಂದ ನಂತರದಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯವನ್ನು ಆರಂಭಿಸುವ ಮೂಲಕ ಮೀನುಗಾರಿಕೆಗೆ ವಿಶೇಷ ಒತ್ತು ನೀಡಿದ್ದಾರೆ ಎಂದರು.
ಕೇಂದ್ರ ಮೀನುಗಾರಿಕೆ ಕಾರವಾರ ಮತ್ತು ಅಂಕೋಲಾಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಾರವಾರದ ಮಾಜಾಳಿ ಮತ್ತು ಅಂಕೋಲಾದ ಬೆಳಾಂಬರ ಮೀನುಗಾರಿಕೆಗೆ ಬಂದರು ನಿರ್ಮಾಣಕ್ಕೆ ಇದ್ದ ಅಡೆತಡೆಗಳನ್ನು ನಿವಾರಿಸುವುದಾಗಿ ಹೇಳಿದ್ದಾರೆ ಎಂದು ಶಾಸಕರು ತಿಳಿಸಿದರು.