ಕಾರವಾರ: ನಗರದ ಬೈತಖೋಲದಲ್ಲಿರುವ ಬಂದರು ಇಲಾಖೆಯ ಕಚೇರಿ ಸಮೀಪ ಅರಣ್ಯ ಪ್ರದೇಶಕ್ಕೆ ಬೆಂಕಿ ಹತ್ತಿಕೊಂಡಿರುವ ಘಟನೆ ಗುರುವಾರ ನಡೆದಿದೆ.
ಗುಡ್ಡಕ್ಕೆ ಬೆಂಕಿ ಹತ್ತಿಕೊಂಡಿರುವುದನ್ನು ಗಮನಿಸಿದ ವ್ಯಕ್ತಿಯೋರ್ವರು ಕೂಡಲೇ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ವಾಹನ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಸ್ಥಳೀಯರು ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು. ಬಿರುಬಿಸಲಿಗೆ ಹುಲ್ಲು, ಗಿಡ, ಮರಗಳ ಎಲೆಗಳು ಒಣಗಿದ್ದರಿಂದ ಬೆಂಕಿ ಆವರಿಸಿದೆ.
ಸ್ಥಳೀಯರು ಬೆಂಕಿ ನಂದಿಸಲು ಮುಂದಾಗದಿದ್ದರೆ ಬಂದರು ಇಲಾಖೆಯ ಕಚೇರಿಯ ಪಕ್ಕದಲ್ಲಿದ್ದ ಸಿಗ್ನಲ್ ಟಾವರ್ಗೆ ಬೆಂಕಿ ಹತ್ತಿಕೊಳ್ಳುವ ಅಪಾಯವಿತ್ತು. ಅಗ್ನಿಶಾಮಕ ದಳದವರು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.