ಕಾರವಾರ: ಜಿಲ್ಲೆಯ ಮುಂಡಗೋಡ ತಾಲೂಕಿನ ಇಂದೂರು ಗ್ರಾಮ ಪಂಚಾಯಿತಿಯ ಕೊಪ್ಪ ಗ್ರಾಮದಲ್ಲಿ ಬೂದು ನೀರಿನ ನಿರ್ವಹಣೆಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಸ್ವಚ್ಛ ಭಾರತ್ ಮೀಷನ್ ಯೋಜನೆಯಡಿ ಸುಮಾರು 15 ಲಕ್ಷ ವೆಚ್ಚದಲ್ಲಿ ದ್ರವ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಗೊಂಡಿದೆ.
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಗ್ರಾಮೀಣ ಪ್ರದೇಶಗಳಲ್ಲಿ ನರೇಗಾದಡಿ ಬಚ್ಚಲುಗುಂಡಿ ನಿರ್ಮಾಣ, ಪೌಷ್ಠಿಕ ಕೈತೋಟ ಹಾಗೂ ಸ್ವಚ್ಚ ಭಾರತ್ ಮೀಷನ್ ದಡಿ ಶೌಚಾಲಯದಂತಹ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದರು ಸಹ ಅಧಿಕ ಮನೆಗಳಿರುವ ಗ್ರಾಮಗಳಲ್ಲಿ ಚರಂಡಿ ನೀರಿನ ಸಮಸ್ಯೆಗೆ ಮುಕ್ತಿ ನೀಡಲು ಬೂದು ನೀರಿನ ನಿರ್ವಹಣಾ ಘಟಕ ನಿರ್ಮಿಸಿ ಶಾಶ್ವತ ಪರಿಹಾರಕ್ಕೆ ಮುಂದಾಗಿದೆ.
ಈ ನೀರಿನಿಂದ ಮರುಬಳಕೆಯು ಸಾಧ್ಯವಾಗಿದ್ದು ರೈತರ ಅನುಕೂಲಕ್ಕೆ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ ಬೂದು ನೀರಿನ ನಿರ್ವಹಣಾ ಘಟಕಕ್ಕೆ ಆಯ್ಕೆಯಾದ ಕೊಪ್ಪ ಗ್ರಾಮದಲ್ಲಿ ಸರಿಸುಮಾರು 185 ಮನೆಗಳಿದ್ದು, 1150 ಜನಸಂಖ್ಯೆ ಹೊಂದಿದೆ. ಇನ್ನು ಇಲ್ಲಿನ ಚರಂಡಿ ನೀರು ರೈತರ ಹೊಲದ ಮೂಲಕ ಕೆರೆಯನ್ನು ಸೇರುತಿತ್ತು. ಇನ್ನು ಈ ಸಮಸ್ಯೆಯಿಂದ ಸುತ್ತಲಿನ ರೈತರ ಹೊಲಗದ್ದೆಗಳಿಗೂ ಸಹಿತ ಸಂಕಷ್ಟ ಎದುರಾಗಿತ್ತು. ಇದೀಗ ವೈಜ್ಞಾನಿಕ ಪ್ರಕ್ರಿಯೆಯಿಂದಾಗಿ ಘಟಕದ ನಿರ್ಮಾಣವು ಪರಿಹಾರ ಸೂಚಿಸಿದೆ.
ಘಟಕ ನಿರ್ಮಾಣದ ಆಯ್ಕೆ: ಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ಬೂದು ನೀರು ನಿರ್ವಹಣೆಗಾಗಿ ಸಮೀಕ್ಷೆ ಕೈಗೊಂಡಾಗ ಸಮಸ್ಯೆಯಿರುವ ಒಂದು ಸ್ಥಳವನ್ನು ಗುರುತಿಸಲಾಯಿತು. ಸದರಿ ಜಾಗವು ಫಿಲಿಪ್ ಥಾಮಸ್ ಪಾರೆಲ್ ಅವರ ಖಾಸಗಿ ತೋಟದ ಮೂಲಕ ಕೆರೆಯನ್ನು ಸೇರುವುದರಿಂದ ತೋಟದ ಜಾಗವನ್ನೆ ಚರಂಡಿಯಲ್ಲಿ ಸಂಸ್ಕರಿಸುವ ವಿಧಾನ ನಿರ್ಮಾಣ ಮಾಡಿ ಬೂದು ನೀರು ಸಂಸ್ಕರಿಸಲು ಸೂಕ್ತವೆಂದು ತಿರ್ಮಾನಿಸಲಾಯಿತು. ಸದರಿ ಜಾಗದ ಮಾಲೀಕರಾದ ಪಿಲೀಪ್ ಥಾಮಸ್ ಪಾರೆಲ್ ಅವರಿಗೆ ಸಮಸ್ಯೆ ಬಗ್ಗೆ ತಿಳಿಸಲಾಯಿತು.