ಚಿಕ್ಕಮಗಳೂರು: ಶೃಂಗೇರಿಯ ವಿಧಾನಸಭಾ ಕ್ಷೇತ್ರದ ಕೊಪ್ಪಕ್ಕೆ ಫೆ.೨೦ ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಆಗಮಿಸಿ ಅಡಿಕೆ ಬೆಳೆಗಾರರ ಜೊತೆ ಸಭೆಯನ್ನು ನಡೆಸುವರು. ನಂತರ ಶೃಂಗೇರಿಯ ವಿಧಾನಸಭಾ ಕ್ಷೇತ್ರದ ಚುನಾಯಿತ ಪ್ರತಿನಿಧಿಗಳ ಜೊತೆ ಮುಂದಿನ ಚುನಾವಣೆ ತಯಾರಿಯ ಬಗ್ಗೆ ಸಭೆ ನಡೆಸಿ ಅಲ್ಲಿಂದ ಶೃಂಗೇರಿಗೆ ತೆರಳಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದು ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಸಿ.ಕಲ್ಮರುಡಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಫೆ.೨೧ ರಂದು ಬೆಳಗ್ಗೆ೯ ಗಂಟೆಗೆ ಶೃಂಗೇರಿಯಿಂದ ಹೊರಟು ಚಿಕ್ಕಮಗಳೂರಿಗೆ ಆಗ ಮಿಸಿ, ಶಾಸಕ ಸಿ.ಟಿ.ರವಿಯವರ ಮನೆಗೆ ಭೇಟಿ ನೀಡುವರು. ನಂತರ ಬೈಕ್ ಜಾಥಾದ ಮುಖಾಂತರ ಕುವೆಂಪು ಕಲಾಮಂದಿರಕ್ಕೆ ೧೦.೩೦ ಕ್ಕೆ ಆಗಮಿಸಲಿದ್ದಾರೆ. ಅಲ್ಲಿ ವಿವಿಧ ಕ್ಷೇತ್ರದ ಗಣ್ಯರೊಡನೆ ಸಭೆಯನ್ನು ನಡೆಸಿ ನಂತರ ಬೇಲೂರಿಗೆ ತೆರಳಲಿದ್ದಾರೆ ಎಂದರು.
ಕಾಂಗ್ರೆಸ್ಸಿಗರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂಬುದನ್ನು ಪದೇ ಪದೇ ಸಾಬೀತು ಪಡಿಸುತ್ತಿದ್ದಾರೆ. ಮೊನ್ನೆ ಅಡಿಕೆ ಬೆಳೆಯ ಬಗ್ಗೆ ಮಾತ ನಾಡಿದ್ದಾರೆ. ಭಾರತೀಯ ಜನತಾ ಪಾರ್ಟಿ ಅಡಿಕೆಗೆ ವಿಶೇಷ ಒತ್ತು ಕೊಟ್ಟು ಕೆಲಸ ಮಾಡಿದ್ದನ್ನು ಜನತೆ ನೋಡಿದ್ದಾರೆ ಎಂದರು.
ಅಡಿಕೆ ಎಲೆ ಚುಕ್ಕಿ ರೋಗಕ್ಕೆ ಪರಿಹಾರ ಕಂಡುಹಿಡಿಯುವ ಹಿನ್ನೆಲೆಯಲ್ಲಿ ೧೦ ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿ ಸ್ಪಂದಿಸಿದ ಸರ್ಕಾರ ನಮ್ಮದು ಎಂದರು.