ಮೈಸೂರು: ನಂಜನಗೂಡು ತಾಲೂಕಿನ ಕಾಡಂಚಿನ ಗ್ರಾಮಗಳ ರೈತರ ಪಾಲಿಗೆ ನರಭಕ್ಷಕನಾಗಿ ಕಾಡುತ್ತಿರುವ ಹುಲಿಯನ್ನು ಸೆರೆಹಿಡಿದು ಅಮಾಯಕರ ಪ್ರಾಣ ರಕ್ಷಣೆ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಹೆಡಿಯಾಲ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕಾರ್ಯಾಚರಣೆ ಆರಂಭವಾಗಿದೆ.
ಹೆಚ್.ಡಿ.ಕೋಟೆ ಹಾದನೂರು ಗ್ರಾಮದ ರೈತ ಶಿವಣ್ಣ ಎಂಬುವರು ಮಂಗಳವಾರ ತಮ್ಮ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುತಿದ್ದ ಸಂದರ್ಭ ಹುಲಿ ದಾಳಿ ಮಾಡಿ ಹತ್ಯೆಗೈದಿತ್ತಲ್ಲದೆ, ಶವವನ್ನು ಕಾಡಿನೊಳಕ್ಕೆ ಎಳೆದೊಯ್ದಿತ್ತು. ಬಳಿಕ ಸ್ವಲ್ಪ ಭಾಗವನ್ನು ತಿಂದು ಹಾಕಿತ್ತು. ಅಲ್ಲದೆ, ಹುಲಿಯನ್ನು ನೋಡಲು ತೆರಳಿದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೃಷ್ಣ ಎಂಬಾತನ ಮೇಲೆರಗಿ ಗಾಯಗೊಳಿಸಿ ಅವರು ಆಸ್ಪತ್ರೆ ಸೇರುವಂತೆ ಮಾಡಿ ಭಯದ ವಾತಾವರಣ ಸೃಷ್ಟಿ ಮಾಡಿತ್ತು. ಸ್ಥಳಕ್ಕೆ ಬಂದ ಪೊಲೀಸ್ ಮತ್ತು ಅರಣ್ಯಾಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹುಲಿಯನ್ನು ಓಡಿಸಿ ದೇಹವನ್ನು ಕಾಡಿನಿಂದ ಹೊರತರಲಾಗಿತ್ತು.
ನರಭಕ್ಷಕ ಹುಲಿಯ ದಾಳಿಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಸ್ಥಳದಲ್ಲೇ ಅರಣ್ಯ ಇಲಾಖೆಯ ಮೇಲೆ ಹರಿಹಾಯ್ದಿದ್ದರು. ಹುಲಿಯನ್ನು ಜೀವಂತ ಸೆರೆ ಹಿಡಿಯ ಬೇಕು ಅಥವಾ ಕೊಲ್ಲಬೇಕು ಇಲ್ಲದಿದ್ದರೆ ಮೃತದೇಹವನ್ನು ಕಾಡಿನಿಂದ ಕೊಂಡೊಯ್ಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಬಿಗುವಿನ ವಾತಾವರಣ ನಿರ್ಮಾಣವಾಗಬಹುದೆಂಬ ಆತಂಕದಿಂದ ಶಿವಣ್ಣನ ಮೃತದೇಹವನ್ನು ಹೆಡಿಯಾಲ ಅರಣ್ಯ ಇಲಾಖೆಯ ಕಚೇರಿಗೆ ರಾತ್ರಿಯೇ ರವಾನಿಸಲಾಗಿತ್ತು.
ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಬುಧವಾರ ಬೆಳಿಗ್ಗೆ ಹಾದನೂರು ಮತ್ತು ಸುತ್ತಮುತ್ತಲ 45ಕ್ಕೂ ಹೆಚ್ಚು ಗ್ರಾಮಗಳ ರೈತರು ಹೆಡಿಯಾಲ ಅರಣ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2ರ ತನಕವು ಬೃಹತ್ ಪ್ರತಿಭಟನೆ ಮಾಡಿ ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರಗಳನ್ನು ಕೂಗಿದರು.
ಇದರಿಂದ ಎಚ್ಚೆತ್ತ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಅರಣ್ಯದಲ್ಲಿ ಬೋನನ್ನಿಡಲಾಗಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನವನದಿಂದ ಸಾಕಾನೆಗಳನ್ನು ಕರೆಯಿಸಲಾಗಿದೆ. ಡಾ.ನಾಗರಾಜ್ ಮತ್ತು ಡಾ. ಶಶಾಂಕ್, ಅರಣ್ಯ ಇಲಾಖೆ, ಎಸ್ಟಿಪಿಎಸ್ ಸಿಬ್ಬಂದಿ, ಇಬ್ಬರು ಶಾರ್ಪ್ ಶೂಟರ್ ಕಾರ್ಯಾಚರಣೆಯಲ್ಲಿದ್ದಾರೆ.
8 ಸಿಸಿ ಕ್ಯಾಮರಾಗಳನ್ನು ತರಿಸಿ ಅಳವಡಿಸಲಾಗುತ್ತಿದ್ದು ಅದರಲ್ಲಿ ಹುಲಿಯ ಪತ್ತೆಕಾರ್ಯವನ್ನು ಮಾಡಲಾಗುತ್ತಿದೆ. ಒಟ್ಟಾರೆ ನರಭಕ್ಷನನ್ನು ಹಿಡಿಯಲೇ ಬೇಕಾಗಿದೆ. ಈಗಾಗಲೇ ಮನುಷ್ಯನ ಮಾಂಸದ ರುಚಿ ಕಂಡಿರುವ ಅದು ಯಾವಾಗ ಬೇಕಾದರು ದಾಳಿ ಮಾಡುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ.