ಮೈಸೂರು: ಮೂವರನ್ನು ಬಲಿ ಪಡೆದು ಪರಾರಿಯಾಗಿದ್ದ ನರಹಂತಕ ಹುಲಿ ಸೆರೆಗೆ ಬಿದ್ದು, ಹೆಡಿಯಾಲ ಗ್ರಾಮದ ಸಮೀಪ ನಂಜನದೇವನ ಬೆಟ್ಟದ ಕಾಡಂಚಿನ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಗುಂಡಿಗೆ ಬಲಿಯಾಗಿದೆ.
ಕಳೆದ ಕೆಲದಿನಗಳಿಂದ ಹೆಚ್.ಡಿ.ಕೋಟೆ ಹಾದನೂರು ಗ್ರಾಮದ ಭಾಗಗಳಲ್ಲಿ ಕಾಡಂಚಿನ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ನರಹಂತಕ ಹುಲಿ ಅನೇಕ ಪ್ರಾಣಿಗಳನ್ನು ತಿಂದು ಹಾಕಿತ್ತು ಅದು ಸಾಲದೆಂಬಂತೆ ಮೂವರನ್ನು ಬಲಿ ಪಡೆದು, ಓರ್ವನ ಮೇಲೆ ದಾಳಿಯನ್ನು ನಡೆಸಿತ್ತು. ಈ ಹಿನ್ನಲೆಯಲ್ಲಿ ನರಹಂತಕ ಹುಲಿಯನ್ನು ಕೊಲ್ಲುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು.
ಸರ್ಕಾರ ನರಹಂತಕ ಹುಲಿಗೆ ಕಂಡಲ್ಲಿ ಗುಂಡಿಕ್ಕಲು ಆದೇಶಿಸಿದ್ದು, ಈ ಹಿನ್ನಲೆಯಲ್ಲಿ ವ್ಯಾಘ್ರ್ಯನ ಹತ್ತಿಕ್ಕಲು ಮುಂದಾದ ಹಿರಿಯ ಅಧಿಕಾರಿಗಳ ನೇತೃತ್ವದ ತಂಡ ಎಸ್ಟಿಎಫ್ ನ ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಹಗಲಿರುಳು ಕಾಡಿನಲ್ಲಿ ಹುಡುಕಾಟ ನಡೆಸಿತ್ತು. ಸತತ ಮೂರು ದಿನಗಳಿಂದ ರಾಂಪುರದ ಆನೆ ಶಿಬಿರದಿಂದ ಸಾಕಾನೆಗಳಾದ ಪೃಥ್ವಿರಾಜ್, ರೋಹಿತ್, ರಾಕೆಟ್ ಆನೆಗಳನ್ನು ಹುಲಿಗೆ ಸೆರೆಗೆ ಬಳಸಿಕೊಂಡು ಅರಣ್ಯದಲ್ಲಿ ಹುಡುಕಾಟ ನಡೆಸಲಾಗಿತ್ತು.
ಅಲ್ಲದೆ ಹೆಚ್.ಡಿ.ಕೋಟೆ ಹಾಗೂ ನಂಜನಗೂಡು ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ನಂಜನದೇವನ ಬೆಟ್ಟದ ಸಮೀಪ ಹೆಡಿಯಾಲ ಗ್ರಾಮದ ಸಮೀಪ ಇಂದು ಅರಣ್ಯ ಸಿಬ್ಬಂದಿಗಳು ಹುಲಿ ಸೆರೆ ಹಿಡಿಯಲು ಎಮ್ಮೆ ಕರವೊಂದನ್ನು ಕಟ್ಟಲು ಹೋದಾಗ ಪೊದೆಯೊಳಗಿದ್ದ ಹುಲಿ ಹಠಾತ್ನೆ ಕರುವಿನ ಹಾಗೂ ಅರಣ್ಯ ಸಿಬ್ಬಂದಿ ಮೇಲೆಯೇ ದಾಳಿ ನಡೆಸಿದೆ. ಆಗ ಅರಣ್ಯ ಇಲಾಖೆ ಸಿಬ್ಬಂದಿಗಳು ಬೇರೆ ದಾರಿ ಕಾಣದೇ ಗುಂಡಿಕ್ಕಿ ಹಂತಕ ಹುಲಿಯನ್ನು ಶೂಟ್ ಮಾಡಿ ಸಾಯಿಸಿದ್ದಾರೆ. ಆ ಮೂಲಕ ಕಳೆದ ಮೂರು ದಿನಗಳಿಂದ ಹುಲಿಯ ಭಯದಲ್ಲೇ ಬದುಕುತ್ತಿದ್ದ ಅಲ್ಲಿನ ಗ್ರಾಮದ ಜನರು ಹುಲಿ ಸಾವಿನಿಂದ ನಿಟ್ಟುಸಿರು ಬಿಟ್ಟಿದ್ದಾರೆ.