ಮೈಸೂರು: ದಿವಂಗತ ಮಾಜಿ ಶಾಸಕ ಶಂಕರಲಿಂಗೇಗೌಡರ ಹಿರಿಯ ಪುತ್ರ ನಗರ ಪಾಲಿಕೆ ಹಾಲಿ ಸದಸ್ಯ ನಂದೀಶ್ ಪ್ರೀತಂ ವಿರುದ್ಧ ಪತ್ನಿ ನೈದಿಲೆ ಕಿರುಕುಳ ದಾಖಲಿಸಿದ ಪ್ರಕರಣವೀಗ ಮತ್ತೊಂದು ಮಜಲು ಪಡೆದುಕೊಂಡಿದ್ದು, ಪತ್ನಿ ನೈದಿಲೆ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ ಎಂದು ನಂದೀಶ್ ಪ್ರೀತಂ ಆರೋಪಿಸಿದ್ದಾರೆ.
ಮದುವೆಯಾದ ಬಳಿಕ 2003 ರಿಂದಲೂ ನನ್ನ ಪತ್ನಿ ಮಾನಸಿಕ ಕಿರುಕುಳ ನೀಡುತ್ತಿದ್ದಳು. 2004 ರಲ್ಲಿ ಕಿರುಕುಳ ನೀಡಿ ನಮ್ಮ ತಂದೆ ತಾಯಿಯನ್ನೇ ಹೊರಗೆ ಹಾಕಿ ಪದೇ ಪದೇ ನನಗೆ ಹಿಂಸೆ ನೀಡುತ್ತಿದ್ದಳು. ಅವಳ ಹಿಂಸೆ ತಾಳಲಾರದೆ ನಾನು ಸರಸ್ವತಿಪುರಂ ಠಾಣೆಗೆ 14 ಬಾರಿ ತೆರಳಿ ದೂರು ದಾಖಲಿಸಿದ್ದೇನೆ ಎಂದರು.
ವಿಜಯನಗರದ ನನ್ನ ಪೆಟ್ರೋಲ್ ಬಂಕ್ ಬಳಿಯೂ ಬಂದು ಗಲಾಟೆ ಮಾಡಿದ್ದ ಪತ್ನಿ ನೈದಿಲೆ ವಿರುದ್ಧ ವಿಜಯನಗರ ಪೊಲೀಸ್ ಠಾಣೆಗೂ ದೂರು ದಾಖಲಿಸಿದ್ದೆ, ನಮ್ಮ ತಂದೆ ಮಾಜಿ ಶಾಸಕರಾದ ಶಂಕರಲಿಂಗೇಗೌಡರು ನಿಧನರಾದ ಬಳಿಕ ಆಕೆಯ ಕಿರುಕುಳ ಮತ್ತಷ್ಟು ಜಾಸ್ತಿಯಾಯಿತು. ಅದಕ್ಕಾಗಿ 2014 ರಲ್ಲಿ ಸರಸ್ವತಿಪುರಂನ ಸ್ವಂತ ಮನೆಯನ್ನೇ ಆಕೆಗೆ ಬಿಟ್ಟು ನಾನೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದರು.
ಈ ಹಿನ್ನಲೆಯಲ್ಲಿ ವಿಚ್ಛೇಧನಕ್ಕೆ ಕೋರ್ಟ್ ಮೊರೆ ಹೋಗಿದ್ದೆ, ಈ ವೇಳೆ ನನ್ನ ಸಹೋದರಿಯ ಮನೆಗೆ ಬಂದು ಅವಾಂತರ ಮಾಡಿ ನನ್ನ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ್ದಾಳೆ ಎಂದು ಪತಿ ನಂದೀಶ್ ಪ್ರೀತಂ ಆರೋಪಿಸಿದ್ದಾರೆ.