ಮೈಸೂರು: ಕರವೇ ಜಿಲ್ಲಾಧ್ಯಕ್ಷರ ಗಡಿಪಾರು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಎಸಿಪಿಯವರ ಮೇಲೆ ಹಲ್ಲೆ ನಡೆಸಿದ ನಾಲ್ಕು ಮಂದಿ ಕರವೇ ಕಾರ್ಯಕರ್ತರ ವಿರುದ್ಧ ಎಸಿಪಿ ಗಿರೀಜೇಶ್ ಅವರು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕರವೇ ಜಿಲ್ಲಾಧ್ಯಕ್ಷ ಪ್ರವೀಣ್ ಶೆಟ್ಟಿ ಗಡಿಪಾರು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪ್ರತಿಭಟನಾ ಮೆರವಣಿಗೆ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಕೆ.ಆರ್ ವೃತ್ತದ ಮೂಲಕ ಸಯ್ಯಾಜಿರಾವ್ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಬೇಕಿತ್ತು.
ಆದರೆ ಕೆ.ಆರ್ ವೃತ್ತದ ಬಳಿ ನಾಲ್ಕು ಮಂದಿ ಕರವೇ ಕಾರ್ಯಕರ್ತರು ಅರಸು ರಸ್ತೆಮಾರ್ಗವಾಗಿ ನುಗ್ಗಲು ಯತ್ನಿಸಿ ಹಾಕಿದ್ದ ಬ್ಯಾರಿಕೇಡ್ ಗಳನ್ನು ತಳ್ಳಿದ್ದಾರೆ. ಅಲ್ಲದೆ ಬ್ಯಾರಿಕೇಡ್ ಅನ್ನು ತಡೆದ ನನ್ನ ಮೇಲೂ ಹಲ್ಲೆ ನಡೆಸಿ ನನ್ನ ತಳ್ಳಿದ್ದರಿಂದ ನನ್ನ ಮೊಣ ಕೈಗೆ ಗಾಯವಾಗಿದೆ. ನನ್ನೊಟ್ಟಿಗೆ ಹಲವು ಪೊಲೀಸರಿಗೆ ಗಾಯವಾಗಿದ್ದು, ಸ್ಥಳೀದಲ್ಲಿದ್ದ ಲಘು ಲಾಠಿ ಪ್ರಹಾರ ನಡೆಸುವ ಮೂಲಕ ಗುಂಪನ್ನು ಚದುರಿಸಿದರು.
ಈ ಸಂಬಂಧ ಅಂದು ಗಲಾಟೆ ನಡೆಸಿ ನನ್ನ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕರವೇ ಮೈಸೂರು ನಗರಾಧ್ಯಕ್ಷ ಕಿರಣ್ ಗೌಡ, ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ನಂಜನಗೂಡಿನ ಹೇಮಂತ್, ಕಾರ್ಯಕರ್ತ ಸುನೀಲ್ ಹಾಗೂ ಇನ್ನಿತರರ ವಿರುದ್ಧ ಎಸಿಪಿ ಗಿರೀಜೇಶ್ ದೇವಾರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.