ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ರಂಗಾಯಣದ ಆವರಣದಲ್ಲಿ ಇಂದಿನಿಂದ(ಜ.14) ಆರು ದಿನಗಳ ಕಾಲ ಬಹರೂಪಿ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ.
ಸಂಜೆ 5.30ಕ್ಕೆ ಆರಂಭವಾಗಲಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ರಂಗಾಯಣದ ವನರಂಗದಲ್ಲಿ ನವದೆಹಲಿಯ ರಂಗ ನಿರ್ದೇಶಕ ಎಂ.ಕೆ.ರೈನ ಚಾಲನೆ ನೀಡಲಿದ್ದಾರೆ. ರಂಗಾಯಣ ನಿರ್ದೇಶಕ ಎಚ್.ಜನಾರ್ಧನ್(ಜನ್ನಿ) ಅಧ್ಯಕ್ಷತೆ ವಹಿಸಲಿದ್ದಾರೆ. ರಂಗಭೂಮಿ ಹಾಗೂ ಚಲನಚಿತ್ರ ನಟ ಬೆಂಗಳೂರಿನ ಅರುಣ್ ಸಾಗರ್ ಅತಿಥಿಯಾಗಿದ್ದಾರೆ.
ಸುಮಾರು 5 ಭಾಷೆಯಲ್ಲಿ ಒಟ್ಟು 31 ನಾಟಕಗಳು, ಚಲನಚಿತ್ರಗಳು ಪ್ರದರ್ಶನವಾಗಲಿದ್ದು, ವಿಚಾರಗೋಷ್ಠಿ, ಬೀದಿ ನಾಟಕೋತ್ಸವ, ಜನಪದೋತ್ಸವ, ಕರಕುಶಲ ವಸ್ತು ಪ್ರದರ್ಶನ ಹಾಗೂ ಮಾರಾಟ, ಪುಸ್ತಕ ಪ್ರದರ್ಶನ ಹಾಗೂ ಮಾರಾಟ, ಅಭಿವ್ಯಕ್ತಿ ಪ್ರದರ್ಶನ ಹಾಗೂ ಮಾರಾಟ ಮತ್ತು ಅಭಿವ್ಯಕ್ತಿ ಕಲಾಶಿಬಿರ ಮತ್ತು ಚಿತ್ರಕಲಾ ಪ್ರದರ್ಶನದ ಜತೆಗೆ ಭಿತ್ತಿಚಿತ್ರ ಪ್ರದರ್ಶನ ನಡೆಯಲಿದೆ.
ನಾಟಕ ಪ್ರದರ್ಶನ ನಡೆಯುವ ಭೂಮಿಗೀತ, ಕಲಾಮಂದಿರ, ವಿಚಾರ ಸಂಕಿರಣ ನಡೆಯುವ ಕಿರುರಂಗಮಂದಿರ, ಸಿನಿಮಾ ಪ್ರದರ್ಶನಕ್ಕೆ ಶ್ರೀರಂಗ ವೇದಿಕೆ ಸಿದ್ದಗೊಂಡಿದೆ. ಕರಕುಶಲ ವಸ್ತು ಪ್ರದರ್ಶನ, ಮಾರಾಟ ಸುಮಾರು 57 ಮಳಿಗೆಗಳಲ್ಲಿ ನಡೆಯಲಿದೆ.
ಮಧ್ಯಾಹ್ನ 3ಕ್ಕೆ ಮೈಸೂರು ಅರಮನೆ ಆವರಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬೀದಿ ನಾಟಕೋತ್ಸವಕ್ಕೆ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಿ.ಎಂ.ರಾಮಚಂದ್ರ ಚಾಲನೆ ನೀಡಲಿದ್ದು, ಕಸಾಪ ನಿಕಟ ಪೂರ್ವ ಅಧ್ಯಕ್ಷ ಎಂ.ಚಂದ್ರಶೇಖರ್ ಉಪಸ್ಥಿತಿ ವಹಿಸುವರು. ಪ್ರತಿದಿನ ಸಂಜೆ 5.30ಕ್ಕೆ ರಂಗಾಯಣದ ಕಿಂದರಿಜೋಗಿ ಆವರಣದಲ್ಲಿ ವಿವಿಧ ರಂಗ ತಂಡದಿಂದ ಬೀದಿ ನಾಟಕ ಪ್ರದರ್ಶನವಾಗಲಿವೆ.
ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಜ.16, 17ರಂದು ಅಭಿವ್ಯಕ್ತಿ: ಸವಾಲುಗಳು ಮತ್ತು ಸಾಧ್ಯತೆಗಳು ವಿಷಯ ಕುರಿತು ವಿಚಾರ ಸಂಕಿರಣ ನಡೆಯಲಿದ್ದು, ರಾಜಕೀಯ ವಿಶ್ಲೇಷಕ ಡಾ.ಯೋಗೇಂದ್ರ ಯಾದವ್ ಉದ್ಘಾಟಿಸಲಿದ್ದಾರೆ. 17ರ ಸಂಜೆ 4.15ಕ್ಕೆ ವಿಚಾರ ಸಂಕಿರಣದ ಸಮಾರೋಪ ಜರುಗಲಿದ್ದು, ರಂಗ ನಿರ್ದೇಶಕ ಪ್ರಸನ್ನ ಸಮಾರೋಪ ಭಾಷಣ ಮಾಡುವರು.
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಆಹಾರ ಮೇಳ ಗಮನಸೆಳೆಯುತ್ತಿದೆ.