ಮೈಸೂರು: ಕೋಟ್ಯಾಂತರ ರೂ ಮೌಲ್ಯದ ಸ್ವರ್ಣಲೇಪನ ಪ್ರಕರಣ ಸೇರಿದಂತೆ ವಿಶ್ವ ವಿಖ್ಯಾತ ಅರಮನೆಯಲ್ಲಿ ಸಾಲು ಸಾಲು ಅಕ್ರಮಗಳ ನಡೆಸಿರುವ ಆರೋಪ ಹೊತ್ತಿರುವ ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್ ಸುಬ್ರಹ್ಮಣ್ಯ ವಿರುದ್ಧ ಮತ್ತೆ ಸಿಎಂ ಹಾಗೂ ರಾಜ್ಯ ಮುಖ್ಯಕಾರ್ಯದರ್ಶಿಗೆ ದೂರು ನೀಡುವುದಾಗಿ ಜಿಲ್ಲಾ ಸಚಿವ ವಿ ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.
ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕರಾಗಿರುವ ಟಿ.ಎಸ್ ಸುಬ್ರಹ್ಮಣ್ಯಂ ನೇಮಕದಲ್ಲೇ ಅಕ್ರಮವೆಸಗಗಿದ್ದು, 2000-04ರವರೆಗೆ ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಇವರು, 2004-06 ರಲ್ಲಿ ಅಂದಿನ ಎಂಎಲ್ಸಿ ತೋಟದಾರ್ಯರ ಆಪ್ತ ಕಾರ್ಯದರ್ಶಿಯಾಗಿದ್ದರು. 2011 ರಲ್ಲಿ ಮೈಸೂರು ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.
ಅಂಬಾ ವಿಲಾಸ ಅರಮನೆಯ ದರ್ಬಾರ್ ಹಾಲ್ನ ಬಣ್ಣ ಮಾಸುತ್ತಿರುವ ಹಿನ್ನಲೆಯಲ್ಲಿ ಕೋಟ್ಯಾಂತರ ರೂ. ಖರ್ಚು ಮಾಡಿ ಚಿನ್ನ ಲೇಪಿತ ಬಣ್ಣ ಹಂಚಲು ಆಡಳಿತ ಮಂಡಳಿ ಮುಂದಾಗಿತ್ತು. ಇದರಲ್ಲೂ ಉಪನಿದೇರ್ಶಕರು ಅಕ್ರಮ ವೆಸಗಿದ್ದರು. ಈ ಬಗ್ಗೆ 10 ಮಂದಿ ತಪಿತಸ್ಥರೆಂದು ಹೈಕೋರ್ಟ್ ತೀರ್ಪು ಸಹ ನೀಡಿತ್ತು.
ಮೈಸೂರು ಅರಮನೆ ಆವರಣದಲ್ಲಿ ಸುತ್ತಾಡುವ ವಿದ್ಯುತ್ ಚಾಲಿತ ವಾಹನದ ಕುರಿತು ಯಾವುದೇ ಟೆಂಡರ್ ಪ್ರಕ್ರಿಯೆಯನ್ನು ನಡೆಸದೇ ನಿಯಮ ಬಾಹಿರವಾಗಿ ಸಂಸ್ಥೆಗೆ ನೀಡಿದ್ದಾರೆ. ಅಲ್ಲದೆ ಅವರಿಂದ ಬರುವ ಆದಾಯ ಹಾಗೂ ಆಡಳಿತ ಮಂಡಳಿಗೆ ಬರುವ ಆದಾಯದಲ್ಲೂ ಸಹ ಲಕ್ಷಾಂತರ ಅಕ್ರಮ ನಡೆಸಿರುವ ಆರೋಪವಿದೆ.