ಮೈಸೂರು: ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಹಣ ಕೊಡಿಸದಿದ್ದರೆ ಸಿಎಂ ಮನೆ ಎದುರು ಪ್ರತಿಭಟಿಸುವುದಾಗಿ ರೈತ ಸಂಘ ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಸಿಎಂ ಸಿದ್ಧರಾಮಯ್ಯನವರ ನಿವಾಸ ಸುತ್ತಾ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಇದನ್ನು ಉಲ್ಲಂಘಿಸಿ ನುಗ್ಗಲೆತ್ನಿಸಿದ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದ್ದು ಓರ್ವ ರೈತ ಅಸ್ವಸ್ಥನಾಗಿದ್ದರೆ, ಉಳಿದ ರೈತರು ರಸ್ತೆಯಲ್ಲೇ ಊಟ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವಾರಗಳ ಹಿಂದೆಯೇ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಬರಬೇಕಾಗಿದ್ದ ಬಾಕಿ ಹಣ ಕೊಡಿಸಿಕೊಡುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸರ್ಕಾರ ಕೂಡಲೇ ಕಬ್ಬು ಬೆಳೆಗಾರರ ಹಣವನ್ನು ಕಾರ್ಖಾನೆಗಳಿಂದ ವಸೂಲಿ ಮಾಡಿಸಿಕೊಡದಿದ್ದರೆ ಫೆ. 10 ರ ಬಳಿಕ ಸಿಎಂ ಸಿದ್ಧರಾಮಯ್ಯ ಹಾಗೂ ಸಚಿವರ ಮನೆ ಮುಂದೆ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದರು.
ಈ ಹಿನ್ನಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಶಾರದದೇವಿ ನಗರದ ನಿವಾಸದ ಎದುರು ಪ್ರತಿಭಟಿಸಲು ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಸಂಘ ಮುಂದಾಗಿದೆ. ಆದರೆ ಮುಂಜಾಗ್ರತ ಕ್ರಮವಾಗಿ ಪೊಲೀಸರು ಸಿಎಂ ಮನೆ ಸುತ್ತಾ 144 ಸೆಕ್ಷನ್ ಜಾರಿ ಮಾಡಿರುವುದಾಗಿ ಬ್ಯಾರಿಕೇಡ್ಗಳನ್ನು ಹಾಕಿ ಪ್ರತಿಭಟನಾ ನಿರತ ರೈತರನ್ನು ತಡೆದಿದ್ದಾರೆ.
ಈ ವೇಳೆ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಹಾಗೂ ತಳ್ಳಾಟ ನೂಕಾಟ ನಡೆದು ಓರ್ವ ರೈತ ಅಸ್ವಸ್ಥನಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಪೊಲೀಸರ ಒತ್ತಡಕ್ಕೆ ಮಣಿದ ಪ್ರತಿಭಟನಾ ನಿರತ ರೈತರು ಸಿಎಂ ಮನೆ ಎದುರಿನ ರಸ್ತೆಯಲ್ಲಿ ಸಾಮೂಹಿಕವಾಗಿ ಊಟ ಮಾಡುವ ಮೂಲಕ ಪ್ರತಿಭಟನೆಯನ್ನು ಮುಂದುವರೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮನ್ನು ಅನ್ನದಾತರು ಎನ್ನುತ್ತೀರಾ ನಾವು ಹೆಲ್ಮೇಟ್ ಹಾಕಿಲ್ಲವೆಂಬುದು ಕಾಣುತ್ತಿದ್ದಂತೆ ತಡೆದು ರಶೀದಿ ನೀಡಿ ನಿಂತಲೇ ಹಣ ಕಟ್ಟಿ ಎನ್ನುತ್ತಾ ಸರ್ಕಾರಕ್ಕೆ ದಿನನಿತ್ಯ ಲಕ್ಷಾಂತರ ಹಣ ವಸೂಲಿ ಮಾಡಿ ಕೊಡುತ್ತೀರಾ, ಅದೇ ರೀತಿ ರೈತರಿಗೂ ಸಕ್ಕರೆ ಕಾರ್ಖಾನೆಗಳಿಂದ ಲಕ್ಷಾಂತರ ಹಣ ಬರಬೇಕಿದೆ ಅದನ್ನು ವಸೂಲಿ ಮಾಡಿಕೊಡಿ ಇಲ್ಲ ನಾವು ಪ್ರತಿಭಟಿಸಲು ಸಹಾಯ ಮಾಡಿ ಎಂದು ಪೊಲೀಸರಿಗೆ ರೈತರು ಮಾತಿನ ಚಾಟಿ ಬೀಸಿ ಗಮನ ಸೆಳೆದರು.