ಮೈಸೂರು: ತಿರುಮಕೂಡಲುವಿನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ 10 ನೇ ಮಹಾಕುಂಭ ಮೇಳಕ್ಕೆ ಭಕ್ತಿಭಾವದ ತೆರೆ ಬಿದ್ದಿದ್ದು ಲಕ್ಷಾಂತರ ಭಕ್ತರು, ಸಾಧು-ಸಂತರು ಸಂಗಮದಲ್ಲಿ ಮಿಂದೆದ್ದು ಭಕ್ತಿ ಸಮರ್ಪಿಸಿದ್ದು ವಿಶೇಷ.
ಕಳೆದ ಮೂರು ದಿನಗಳಿಂದ ಜಿಲ್ಲೆಯ ತಿ. ನರಸೀಪುರದ ಹಳೆ ತಿರುಮಕೂಡಲಿನಲ್ಲಿ ಕಿಕ್ಕಿರಿದ ಜನಸಂದಣಿ ಲಿಂಗ ಬೇಧವಿಲ್ಲದೆ ಎಲ್ಲಾ ವಯೋಮಾನದವರು ಒಂದೆಡೆ ಸೇರಿ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರಲ್ಲದೆ ಆಸ್ತಿಕರೆಲ್ಲರೂ ಪುಣ್ಯ ಸಂಗಮದಲ್ಲಿ ಮಿಂದು ಪುನೀತರಾಗಿ ದೇಗುಲಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಕಾವೇರಿ, ಕಪಿಲಾ ಮತ್ತು ಸ್ಪಟಿಕ ನದಿಗಳ ಸಂಗಮ ಕ್ಷೇತ್ರದ ಎರಡು ದಂಡೆಗಳಲ್ಲಿಯೂ ಗುಂಜಾ ನರಸಿಂಹಸ್ವಾಮಿ, ಶ್ರೀ ಬಳ್ಳೇಶ್ವರಸ್ವಾಮಿ ಮತ್ತು ಅಗಸ್ತ್ಯೇಶ್ವರ ದೇವಾಲಯಗಳಿರುವುದು ಸಾಮರಸ್ಯಕ್ಕೆ ಪ್ರತೀಕವಾಗಿದೆ. ಅಲ್ಲದೆ ಮೂವರು ಮುನಿಗಳು ಸೇರಿ ಮರಳಿನಲ್ಲಿ ಶಿವಲಿಂಗವನ್ನು ನಿರ್ಮಿಸಿ ಪೂಜಿಸಿದ ಪುರಾಣ ಇತಿಹಾಸವನ್ನು ಈ ಸಂಗಮ ಕ್ಷೇತ್ರ ಒಳಗೊಂಡಿದೆ. ಆದುರಿಂದಲೇ ಇಲ್ಲಿ ಹರಿಯುವ ನದಿ ಗಂಗಾ ತೀರ್ಥಕ್ಕಿಂತಲೂ ಗುಲಗಂಜಿ ಪ್ರಮಾಣದಷ್ಟು ಶ್ರೇಷ್ಟ ಎಂಬ ಮಾತಿದೆ.
ಈ ಹಿನ್ನಲೆಯಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಸರ್ವಧರ್ಮದ ಸ್ವಾಮೀಜಿಗಳ ನೇತೃತ್ವದಲ್ಲಿ ಸರ್ವ ಧರ್ಮಿಯರು ಇಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ನದಿಯಲ್ಲಿ ಮಿಂದೆದ್ದು ಪುನೀತರಾಗುತ್ತಾರೆ.
ಪುಜಾಕುಣಿತ, ಡೊಳ್ಳು ಕುಣಿತ, ಕೀಲು ಕುದುರೆ, ಗಾರುಡಿ ಕುಣಿತ, ಗಾರುಡಿ ಗೊಂಬೆ, ಕೋಲಾಟ, ಜನಪದ ಗೀತೆ, ಸೋಬಾನೆ ಪದ, ನೃತ್ಯ ರೂಪಕ, ನಾದಸ್ವರ, ನಗಾರಿ, ಸುಗಮ ಸಂಗೀತ, ದೊಣ್ಣೆ ವರಸೆ, ಸೇರಿದಂತೆ ನಾನಾ ಕಲಾತಂಡಗಳು ತಮ್ಮ ಪ್ರದರ್ಶನ ನೀಡಿ ನೋಡುಗರ ಕಣ್ಮನ ತಣಿಸಿದವು. ನೀನು ನದಿ ದಾಟಲು ಹಲವಾರು ತೆಪ್ಪಗಳು ಸಹಕಾರಿ ಮೂನ್ನೂರಕ್ಕೂ ಹೆಚ್ಚು ಸ್ವಯಂ ಸೇವಕರು ಭಕ್ತರ ಸೇವೆಗೆ ಸಹಕರಿಸಿದರು. ಒಟ್ಟಾರೆ ಕಳೆದ ಮೂರು ದಿನಗಳಿಂದ ನಡೆದ ಸಾಮಾಹಿಕ ಧರ್ಮಗುರುಗಳ ಪ್ರವಚನ, ಸಮಾಹಿಕ ದೀಪದ ಆರತಿಯ ಜ್ಯೋತಿ ನಾನಾ ಕಾರ್ಯಕ್ರಮಗಳು ಎಲ್ಲರನ್ನು ಸೆಳೆಯುವ ಮೂಲಕ ಇಂದು ಸಿಎಂ ಸಿದ್ದರಾಮಯ್ಯನವರಿಂದ ಸಮಾರೋಪ ಭಾಷಣದ ಮೂಲಕ 10 ನೇ ಮಹಾ ಕುಂಭಮೇಳಕ್ಕೆ ವೈಭವದ ತೆರೆ ಎಳೆಯಲಾಯಿತು.