ಮೈಸೂರು: ಈ ಬಾರಿಯ ಜಿಪಂ ಮತ್ತು ತಾಪಂ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ನೀಡಿರುವ ಎಚ್ಚರಿಕೆಯ ಕರೆ ಗಂಟೆ ಎಂದು ಮಾಜಿ ಸಂಸದ ಅಡಗೂರು ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಆತ್ಮಾವಲೋಕನದ ಬಗ್ಗೆ ಮಾತನಾಡುವುದು ಮಾಮೂಲಿಯಾಗಿದೆ. ಇದನ್ನು ತಪ್ಪಿಸಬೇಕೆಂದರೆ ಪಕ್ಷದಲ್ಲಿ `ಮೆಕ್ಯಾನಿಸಂ’ ಇರಬೇಕು. ಚುನಾವಣೆಯಲ್ಲಿ ಯಾರು ಸ್ಪರ್ಧಿಸಬೇಕೆಂದು ಪಕ್ಷ ತೆಗೆದುಕೊಳ್ಳಬೇಕಾದ ನಿರ್ಧಾರವನ್ನು ಶಾಸಕರು ಹಾಗೂ ಸಚಿವರಿಗಿಂತ ಜನರಿಗೆ ಆಯ್ಕೆ ಬಿಡಬೇಕು ಎಂದರು.
ಇದ್ಯಾವುದು ಆಗದ ಕಾರಣ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಇನ್ನುಳಿದ ಆಡಳಿತದ ಅವಧಿಯಲ್ಲಿ ರಾಜ್ಯಕ್ಕಾಗಿ ಉತ್ತಮ ಯೋಜನೆಗಳನ್ನು ನೀಡಲು ಸಲಹೆ ನೀಡಿದರು.
ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸುತ್ತದೆ ಎಂಬ ಸಿಎಂ ಅವರ ನಂಬಿಕೆ ಹುಸಿಯಾಗಿದ್ದು, ಜಾ.ದಳ ಕೋಮುವಾದಕ್ಕೆ ಬೆಂಬಲ ನೀಡಿ ತನ್ನ ಭದ್ರತೆಯನ್ನು ಕಳೆದುಕೊಂಡು ಜೆಡಿಎಸ್ ಹೋಗಿ ಜೆಡಿ ಆಗಿ ರೂಪುಗೊಂಡಿದೆ ಎಂದು ವ್ಯಂಗ್ಯವಾಡಿದರು.
ಇತ್ತೀಚೆಗೆ ಜನಪ್ರತಿನಿಧಿಗಳು ತಮ್ಮ ಕುಟುಂಬದ ಸದಸ್ಯರು ಚುನಾವಣಾ ಕಣದಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದು ಪಕ್ಷದ ಮೇಲೆ ಪರಿಣಾಮ ಬೀರುತ್ತಿದೆ ಎಂದರು. ಮುಖ್ಯಮಂತ್ರಿ ಅವರ ಮಕ್ಕಳು ಒಳಗೊಂಡಂತೆ ಶಾಸಕರು, ಸಚಿವರ ಮಕ್ಕಳ, ಕುಟುಂಬ ಸದಸ್ಯರ ಮೇಲೆ ಪಕ್ಷ ಕಣ್ಗಾವಲು ಇಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಕಾರ್ಯ ಪ್ರಜ್ಞೆ ಇಲ್ಲದ ಮಂತ್ರಿಗಳನ್ನಿಟ್ಟುಕೊಂಡು ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಡುಗೊರೆಯಾಗಿ ಬಂದ ದುಬಾರಿ ವಾಚ್ ಅನ್ನು ಕ್ಯಾಬಿನೆಟ್ ಗೆ ನೀಡಿ, ಮುಂದಿನ ಮುಖ್ಯಮಂತ್ರಿಗಳು ಅದನ್ನು ಧರಿಸಲು ಅನುವು ಮಾಡಿಕೊಡಲಿ ಎಂದು ಸಲಹೆ ನೀಡಿದರು.