ಮೈಸೂರು: ಎಂಟು ವರ್ಷಗಳ ಹಿಂದೆ ನಡೆದಿದ್ದ ಮೈಸೂರು ನಗರದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣ ಸಂಬಂಧ ಮೈಸೂರು ಕಾರ್ಪೋರೇಟರ್ ಮಾದೇಶ ಹಾಗೂ ಸಹೋದರ ಮಂಜುನಾಥ್ ಸೇರಿದಂತೆ 8 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ಮೈಸೂರು ಜಿಲ್ಲಾ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ.
ಮೈಸೂರು ನಗರ ಪಾಲಿಕೆಯ 32 ನೇ ವಾರ್ಡಿನ ಜೆಡಿಎಸ್ ನ ಹಾಲಿ ಸದಸ್ಯ ಮಾದೇಶ ( ಅವ್ವ ಮಾದೇಶ), ಹಾಗೂ ಸಹೋದರ ಮಂಜುನಾಥ್ ಸೇರಿದಂತೆ ಇತರೆ 8 ಮಂದಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ. ಪ್ರಕರಣ ಸಂಬಂಧ ಎರಡು ಅವಧಿಯ ಕಠಿಣ ಶಿಕ್ಷೆ(10) ವಿಧಿಸಲಾಗಿದೆ. ಇದರ ಜೊತೆಗೆ ಪ್ರಕರಣದ ಮೊದಲ ಆರೋಪಿಗೆ 3 ಲಕ್ಷ ರೂ ದಂಡ ಹಾಗೂ ಉಳಿದ ಆರೋಪಿಗಳಿಗೆ ತಲಾ 1 ಲಕ್ಷ ದಂಡ ವಿಧಿಸಿ ಮೈಸೂರು ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಈ ನಡುವೆ ವಿಧಿಸಿದ ದಂಡದ ಹಣದಲ್ಲಿ ಹತ್ಯೆಯಾದ ಇಬ್ಬರು ಕುಟುಂಬಗಳಿಗೆ ತಲಾ ಮೂರು ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ. ಪ್ರಕರಣ ಸಂಬಂಧ ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಬೆಳಿಗ್ಗೆ 8 ಮಂದಿ ವಿರುದ್ದ ಕೊಲೆ ಆರೋಪ ಸಾಬೀತಾಗಿತ್ತು. 2008 ರಲ್ಲಿ ನಡೆದಿದ್ದ ಈ ಜೋಡಿ ಕೊಲೆ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ನಡೆದಿದೆ ಎಂಬ ಮಾತು ಕೇಳಿ ಬಂದಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಅವ್ವ ಮಾದೇಶ್ ಸೇರಿದಂತೆ 10 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.