ಮೈಸೂರು: ವಿಜ್ಞಾನ ಮತ್ತು ತಂತ್ರಜ್ಞಾನದಿಂದ ವಿವೇಕ ನಶಿಸಿ ಹೋಗುತ್ತಿದ್ದು, ಭಾಷಾ ವಿಜ್ಞಾನಿಗಳು ಕನ್ನಡ ಭಾಷೆಯನ್ನು ಅವಸಾನದ ಪಟ್ಟಿಗೆ ಸೇರಿಸಿದ್ದಾರೆ ಎಂದು ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಬೇಸರ ವ್ಯಕ್ತಪಡಿಸಿದರು.
ಮೈಸೂರಿನ ಧ್ವನ್ಯಾಲೋಕದಲ್ಲಿ ಕನ್ನಡ ಓದುಗರ ಒಕ್ಕೂಟ ಇಂದು ಏರ್ಪಡಿಸಿದ್ದ 61ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ತಂತ್ರಜ್ಞಾನದ ಆವಿಷ್ಕಾರದಿಂದ ಇಂದು ಪ್ರೇಮ ಬರಹವೂ ದೂರವಾಗಿದ್ದು, ಮೊಬೈಲ್ ಮತ್ತು ತಂತ್ರಜ್ಞಾನದಲ್ಲಿಯೇ ಆರಂಭವಾಗಿ ಅಲ್ಲಿಯೇ ಅವಸಾನಗೊಳ್ಳುತ್ತಿದೆ ಎಂದರು.
ಭಾಷಾ ವಿಜ್ಞಾನಿಗಳು ಕನ್ನಡ ಅವಸಾನದಂಚಿನಲ್ಲಿವೆ ಎನ್ನುತ್ತಾರೆ. ಆದರೆ ಕನ್ನಡಕ್ಕೆ ಫಿನಿಕ್ಸ್ ಪಕ್ಷಿಯಂತೆ ಎದ್ದು ಬರುವ ತಾಕತ್ತಿದೆ. ಇಂಗ್ಲೀಷ್ ನಮ್ಮನ್ನಾಳಲು ಬಿಡಬಾರದು. ಆದರೆ ಅದರ ಪರಿಧಿಯೊಳಗೆ ಸೀಮಿತಗೊಳಿಸಬೇಕು. ಜ್ಞಾನ, ವ್ಯವಹಾರಕ್ಕೆ ಮಾತ್ರ ಅದನ್ನು ಮೀಸಲಿರಿಸಬೇಕು ಎಂದು ತಿಳಿಸಿದರು.
ಕನ್ನಡದ ಹೋರಾಟ ಮೊದಲು ಮನೆಯಿಂದಲೇ ಆರಂಭಗೊಳ್ಳಬೇಕು. ಪ್ರಾಥಮಿಕ ಹಂತದಲ್ಲಿಯೇ ಕನ್ನಡ ಪ್ರಥಮ ಭಾಷೆಯಾಗಿ ಕಡ್ಡಾಯವಾಗಿರಬೇಕು. ಇತರ ಭಾಷಿಕರಿಗೆ ತಮ್ಮ ಭಾಷೆಯ ಮೇಲೆ ವ್ಯಾಮೋಹವಿರುತ್ತದೆ ಆದರೆ ಕನ್ನಡಿಗರಲ್ಲಿ ಅದು ಕಡಿಮೆ. ಕನ್ನಡಿಗರೂ ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ರಾಮೇಶ್ವರಿ ವರ್ಮ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಂಗಾರಾವ್ ಕಾಲೇಜು ನಿವೃತ್ತ ಪ್ರಾಂಶುಪಾಲೆ ನಾಗರತ್ನ, ಸಂಘದ ಸದಸ್ಯೆ ಪದ್ಮಾವತಿ ಮತ್ತಿತರರು ಉಪಸ್ಥಿತರಿದ್ದರು.