ಮೈಸೂರು: ಮೈಸೂರಿನ ಹಳೆಸಂತೆ ಪೇಟೆಯ ಪ್ಲಾಸ್ಟಿಕ್ ಮತ್ತು ಪೇಪರ್ ತುಂಬಿದ್ದ ಗೋದಾಮಿನಲ್ಲಿ ಬುಧವಾರ ಬೆಳಗಿನ ಜಾವ ಅಗ್ನಿ ಆಕಸ್ಮಿಕ ಸಂಭವಿಸಿ ಲಕ್ಷಾಂತರ ರೂ.ಮೌಲ್ಯದ ಸಾಮಗ್ರಿಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ.
ಹಳೆ ಸಂತೆ ಪೇಟೆಯ ಶಿವಣ್ಣ ಎಂಟರ್ ಪ್ರೈಸಸ್, ಭವಾನಿ ಟ್ರೇಡಿಂಗ್ ನ ಗೋದಾಮಿನ ಮೇಲ್ಗಡೆ ಬುಧವಾರ ಬೆಳಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಹೊಗೆಯುಗುಳುತ್ತಿರುವುದನ್ನು ಗಮನಿಸಿದ ದೇವರಾಜ ಪೊಲೀಸ್ ಠಾಣೆಯ ಸಿಬ್ಬಂದಿಗಳು ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಸರಸ್ವತಿಪುರಂ ಮತ್ತು ಬನ್ನಿಮಂಟಪದ ಬಳಿಯಿಂದ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿದ್ದು, ಬೆಂಕಿ ಆರಿಸುವಲ್ಲಿ ಹರಸಾಹಸ ನಡೆಸಿದ್ದು, ಕೊನೆಗೂ ಯಶಸ್ವಿಯಾದರು. ಅಗ್ನಿ ಆಕಸ್ಮಿಕ ಸಂಭವಿಸಲು ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ದೇವರಾಜ ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಾಗಿದೆ. ಕಳೆದ ಆರು ತಿಂಗಳಿನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿರುವುದು ಇದು ಎರಡನೇ ಬಾರಿಯಾಗಿದೆ.