ಮೈಸೂರು: ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿರುವ ಎರಡು ದಿನಗಳ ಕೇಕ್ ಉತ್ಸವಕ್ಕೆ ಶಾಸಕ ವಾಸು ಮಂಗಳವಾರ ಚಾಲನೆ ನೀಡಿದರು.
ಜಿಲ್ಲಾಡಳಿತ, ಹೋಟೆಲ್ಸ್, ರೆಸ್ಟೋರೆಂಟ್ಸ್ ಹಾಗೂ ಬೇಕರಿ ಮಾಲೀಕರ ಸಂಘದ ಸಂಯುಕ್ತಾಶ್ರಯದಲ್ಲಿ ಕೇಕ್ ಉತ್ಸವ ಆಯೋಜಿಸಲಾಗಿದೆ. ಕ್ರೈಸ್ತರ ಪವಿತ್ರ ಹಬ್ಬ ಕ್ರಿಸ್ಮಸ್ ಹಾಗೂ ಹೊಸವರ್ಷವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸುವುದರಿಂದ ಕೇಕ್ ಪ್ರಿಯರನ್ನು ಸೆಳೆಯಲು ಕಳೆದ ಮೂರು ವರ್ಷಗಳಿಂದ ಈ ಉತ್ಸವವನ್ನು ಆಚರಿಸಲಾಗುತ್ತಿದ್ದು, ವಿಭಿನ್ನ ಕೇಕ್ ಗಳನ್ನು ವಸ್ತುಪ್ರದರ್ಶನದ ರೀತಿ ಸಿದ್ಧಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬಗೆಬಗೆಯ ಕೇಕ್ ಗಳ ಸವಿಯನ್ನು ಸವಿಯಬೇಕು ಎಂದು ಹೇಳಿದರು.
ಲಾಯಲ್ ವರ್ಲ್ಡ್ ತಯಾರಿಸಿರುವ 650 ಕೆಜಿ ತೂಕದ ವಿಂಟೇಜ್ ಕಾರ್, 230 ಕೆಜಿ ತೂಕದ ದುಬೈ ಬುರ್ಜಿ, ಸ್ವೀಟ್ ಪ್ಯಾಲೆಸ್ ನ ಸ್ಪೈಡರ್ ಮ್ಯಾನ್, ಬುಕ್ ಆಕಾರದ ಕೇಕ್, ಆಂಗ್ರಿ ಬರ್ಡ್, ವಿವಿಧ ವೆಡ್ಡಿಂಗ್ ಕೇಕ್ಗಳು, ಕಿಡ್ಸ್ ಕೇಕ್, ಬಾಬಿ ಗರ್ಲ್, ಲೆಮನ್ ಟಾಟ್ರ್ಸ್, ಕನ್ಪೆಷನರಿ ಕೇಕ್ ಗಳು, ಫ್ರೆಂಚ್ ಡ್ಯಾನಿಸಸ್, ಸ್ಟ್ರಾಬೆರಿ ಮೆಸ್ ಸೇರಿದಂತೆ ವಿಭಿನ್ನ ಹಾಗೂ ವಿಶಿಷ್ಟ ಕೇಕ್ ಗಳನ್ನು ಮಾರಾಟ ಹಾಗೂ ಪ್ರದರ್ಶನಕ್ಕಿಡಲಾಗಿತ್ತು.
ಡಾಲ್ಫಿನ್, ಅರೋಮ, ಬಿಂದು ಬೇಕರಿ, ಶ್ರೀರಾಮ್ ಬೇಕರಿ, ಮಾಸ್ಟರ್ ಬೇಕರ್ಸ್, ವಿನಾಯಕ ಬೇಕರಿ, ಪಾಸ್ಟ್ರಿ ವರ್ಡ್ ಸೇರಿದಂತೆ 22 ಕೇಕ್ ಅಂಗಡಿಗಳು ಹಾಗೂ 5 ಟೀ ಸ್ಟಾಲ್ ಗಳನ್ನು ತೆರೆಯಲಾಗಿದೆ. ಜತೆಗೆ ಕೇಕ್ ತಿನ್ನುವ ಸ್ಪರ್ಧೆ, ಗಾಯನ ಸ್ಪರ್ಧೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಕಾ.ರಾಮೇಶ್ವರಪ್ಪ, ಕೈಗಾರಿಕಾ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್, ಉಪ ಮೇಯರ್ ರತ್ನ ಲಕ್ಷ್ಮಣ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಅರೆ ಭಾಷಾ ಸಂಘದ ಗಿರೀಶ್, ಮೋಹನ್ದಾಸ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.