ಮೈಸೂರು: ಬಾಳೆ ತೋಟದಲ್ಲಿ ಮರಿಸಹಿತ ತಾಯಿ ಹುಲಿ ಬೀಡು ಬಿಟ್ಟು, ರೈತರ ಹಸುಗಳನ್ನು ತಿಂದು ಹಾಕುತ್ತಾ ಹೆಚ್.ಡಿ.ಕೋಟೆಯ ಮಳಲಿ ಗ್ರಾಮದಲ್ಲಿ ಭಯ ಹುಟ್ಟಿಸಿರುವ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಆದ ಎಡವಟ್ಟಿನಿಂದಾಗಿ ಗ್ರಾಮಸ್ಥ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.
ಎನ್.ಬೆಳತ್ತೂರು ಗ್ರಾಮದ ನಂಜಪ್ಪನವರ ಪುತ್ರ ಮೂರ್ತಿ(25) ಮೃತಪಟ್ಟ ದುರ್ದೈವಿ. ಅರಣ್ಯಾಧಿಕಾರಿ ಮಹೇಶ್, ಹೊಸಹೊಳಲು ಗ್ರಾಮದ ಕೆಂಪಯ್ಯ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಳಲಿ ಗ್ರಾಮದ ಕಿರಬಣ್ಣನ ಮಾಯ ಎಂಬುವರ ಬಾಳೆ ತೋಟದಲ್ಲಿ ಕಳೆದ ಒಂದು ತಿಂಗಳಿನಿಂದ ಹುಲಿ ಮರಿಯೊಂದಿಗೆ ವಾಸ್ತವ್ಯ ಹೂಡಿ, ಆಗಾಗ್ಗೆ ಸಾರ್ವಜನಿಕರಿಗೆ ಕಾಣಿಸಿಕೊಳ್ಳುತ್ತಿದ್ದವಲ್ಲದೆ, ನಾಲ್ಕು ಹಸುಗಳನ್ನು ಬಲಿಪಡೆದಿದ್ದವು. ಇದರಿಂದ ಭಯಭೀತಗೊಂಡ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಅರಣ್ಯ ಇಲಾಖೆ ಕಳೆದ ನಾಲ್ಕೈದು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿತ್ತು. ಈ ಕಾರ್ಯಾಚರಣೆಯಲ್ಲಿ ಸುಮಾರು 40 ಮಂದಿ ಪಾಲ್ಗೊಂಡಿದ್ದರು. ಕಾರ್ಯಾಚರಣೆ ಸಂದರ್ಭ ಹುಲಿ ಪತ್ತೆಯಾಗಿರಲಿಲ್ಲ. ಆದರೆ ಬಾಳೆ ತೋಟದಲ್ಲಿ ವಾಸ್ತವ್ಯ ಹೂಡಿರುವುದು ಖಚಿತವಾಗಿತ್ತು. ಹೀಗಾಗಿ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಬಾಳೆತೋಟದಲ್ಲಿ ಅಡಗಿ ಕುಳಿತಿರುವ ಹುಲಿಯನ್ನು ಅಲ್ಲಿಂದ ಎಬ್ಬಿಸಿ ಕಾಡಿಗೆ ಅಟ್ಟುವುದು ಕಾರ್ಯಾಚರಣೆಯ ಉದ್ದೇಶವಾಗಿತ್ತು. ಹೀಗಾಗಿ ಪಟಾಕಿ ಸಿಡಿಸುತ್ತಾ, ದಟ್ಟನೆಯ ಹೊಗೆ ಹಾಕುತ್ತಾ, ಗುಂಡು ಹಾರಿಸುತ್ತಾ ಕಾರ್ಯಾಚರಣೆ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಹೀಗೆ ಗಾಳಿಯಲ್ಲಿ ಗುಂಡು ಹಾರಿಸುವ ಸಂದರ್ಭ ಅದು ಗ್ರಾಮಸ್ಥ ಮೂರ್ತಿ ಎಂಬುವರಿಗೆ ತಗುಲಿ ಅವರು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೆ ವಲಯ ಅರಣ್ಯಾಧಿಕಾರಿ ಮಹೇಶ್ ಎಂಬುವರಿಗೆ ತಗುಲಿದ್ದು, ಅವರು ಗಂಭೀರ ಗಾಯಗೊಂಡಿದ್ದಾರೆ, ಇನ್ನೊಬ್ಬ ಕೆಂಪಯ್ಯ ಎಂಬುವರ ಕೈಗೆ ತಾಗಿದೆ. ಗುಂಡೇಟಿನಿಂದ ಗಂಭೀರ ಗಾಯಗೊಂಡ ಮೂರ್ತಿ ಮೃತಪಟ್ಟರೆ, ಗಂಭೀರ ಗಾಯಗೊಂಡ ಮಹೇಶ್ ಮತ್ತು ಕೆಂಪಯ್ಯ ಅವರಿಗೆ ಹೆಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಈ ನಡುವೆ ಮೃತಪಟ್ಟ ಮೂರ್ತಿ ಕುಟುಂಬಕ್ಕೆ ಸರ್ಕಾರ ಎರಡು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ.