ಮೈಸೂರು: ವೇದಿಕೆ ತುಂಬೆಲ್ಲಾ ನಾಯಕರು, ಕಾರ್ಯಕರ್ತರ ಕುರ್ಚಿಯಲ್ಲಾ ಖಾಲಿ, ಖಾಲಿ. ಕಾಂಗ್ರೆಸ್ ಕಾರ್ಯಧ್ಯಕ್ಷ ದಿನೇಶ ಗುಂಡೂರಾವ್ ಕರೆದ ಮೈಸೂರು ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಹೈಲೈಟ್ಸ್.
ರಾಜ್ಯದಲ್ಲಿ ಕಾಂಗ್ರೆಸ್ ದಿನೇ ದಿನೆ ತನ್ನ ವರ್ಚಸ್ಸು ಕಳೆದುಕೊಂಡು ನೆಲ ಕಚ್ಚುತ್ತಿದ್ದು, ಆಡಳಿತ ಯಂತ್ರದ ವೈಫಲ್ಯ, ನಾಯಕರುಗಳ ಕಿತ್ತಾಟ ಎಲ್ಲವೂ ಸೇರಿಕೊಂಡು ಕಾಂಗ್ರೆಸ್ ಕಾರ್ಯಕರ್ತರೇ ಪಕ್ಷದ ಬಗ್ಗೆ ಬೇಸರ ಪಡುವಂತೆ ಮಾಡಿದೆ. ಇದು ಸಿಎಂ ತವರು ಕ್ಷೇತ್ರ ಮೈಸೂರಿನಲ್ಲಿ ಕಂಡು ಬಂದ ದೃಶ್ಯ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಕರೆದಿದ್ದ ಕಾರ್ಯಕಾರಿಣಿ ಸಭೆ ಕಾರ್ಯಕರ್ತರಿಲ್ಲದೆ ಬಣಗುಡುತ್ತಿತ್ತು. ನಂಜನಗೂಡು ಉಪ ಚುನಾವಣೆ ಹಾಗೂ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಲು, ಮೈಸೂರಿನ ಜಗನ್ಮೋಹಿನಿ ಅರಮನೆಯಲ್ಲಿ ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿತ್ತು.
ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಾದ ಸಭೆ ಕಾರ್ಯಕರ್ತರ ಅಭಾವದಿಂದ ಒಂದು ಗಂಟೆ ತಡವಾಗಿ ಆರಭಂವಾಯಿತು. ಮೋದಲೇ ನಗರಕ್ಕೆ ಆಗಮಿಸಿದ್ದ ಕಾರ್ಯಾಧ್ಯಕ್ಷರು ಕಾರ್ಯಕರ್ತರಿಗಾಗಿ ಕಾಯುವ ಪರಿಸ್ಥಿತಿ ಎದುರಾಯಿತು. ಸಾವಿರ ಮಂದಿ ಸೇರುವ ಜಾಗದಲ್ಲಿ ಕೆಲವೇ ಮಂದಿ ಭಾಗಿಯಾಗಿದ್ದು ನಾಯಕರದಲ್ಲಿ ಇರುಸು ಮುರುಸು ಉಂಟುಮಾಡಿತು.
ಈ ವಿಚಾರವನ್ನ ಮನಗೊಂಡ ನಾಯಕರು ವೇದಿಕೆ ಮೇಲೆ ಮಾತನಾಡುವಾಗ ನಾವು ಪಕ್ಷ ಸಂಘಟನೆಯಲ್ಲಿ ಹಿಂದೆ ಬಿದ್ದಿದ್ದೇವೆ ಎಂದು ಒಪ್ಪಿಕೊಂಡರು. ಈ ಬಗ್ಗೆ ವೇದಿಕೆಯಲ್ಲೇ ಅಸಮಾಧಾನ ಹೊರ ಹಾಕಿದ ಮಾಜಿ ಸಂಸದ ಹೆಚ್.ವಿಶ್ವನಾಥ್ ಜಿಲ್ಲೆಯಲ್ಲಿ ಕಾಂಗ್ರೆಸ್ಗೆ ಭಾರಿ ಹೊಡೆತ ಬಿದ್ದಿದೆ. ದೇವರಾಜ್ ಅರಸು ಹಾಗೂ ಗುಂಡುರಾವ್ ಇದ್ದ ಕಾಲದಲ್ಲಿ ಕಾರ್ಯಕರ್ತರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವ ಕೆಲಸ ನಡೆಯುತ್ತಿತ್ತು. ಈಗಿರುವವರು ನಮಗ್ಯಾಕೆ ಎಂದು ಕುಳಿತಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯಾಗೆ ಟಾಂಗ್ ನೀಡಿದರು.
ಇನ್ನು ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಮಾತನಾಡುತ್ತಾ, ಚುನಾವಣೆಯಲ್ಲಿ ನಮ್ಮ ಸರ್ಕಾರ ಮಾಡಿರುವ ಸಾಧನೆಗಳಿಂದ ಗೆಲ್ಲಲು ಸಾಧ್ಯವಾಗಿದ್ದು, ಇನ್ನಾವುದೇ ವಿಚಾರ ಗಣನೆಗೆ ಬರೋದಿಲ್ಲ ಎಂದರು. ಅಭಿವೃದ್ಧಿ ಕಾರ್ಯದ ಬಗ್ಗೆ ಯಾವ ಪಕ್ಷದ ಜೊತೆಯಲ್ಲಿ ಬೇಕಾದರೂ ಚರ್ಚೆಗೆ ಸಿದ್ದವಾಗಿದ್ದು, ಕಾರ್ಯಕರ್ತರು ಹಾಗೂ ನಾಯಕರು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಭೆ ನಡೆಸಿ ಸರ್ಕಾರದ ಸಾಧನೆಯನ್ನು ತಿಳಿಸುವ ಕೆಲಸ ಮಾಡಬೇಕು ಎಂದರು. ಕೇಂದ್ರ ಅವೈಜ್ಙಾನಿಕವಾಗಿ ನೋಟು ಅಮಾನ್ಯಕರಣ ಮಾಡಿದ್ದು, ಈ ಬಗ್ಗೆ ಜನವರಿ 6 ರಂದು ಬೃಹತ್ ಪ್ರತಿಭಟನೆಗೆ ನೀವೆಲ್ಲರೂ ಸಾಥ್ ನೀಡಬೇಕು ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.