ಮೈಸೂರು: ಸಕ್ಕರೆ ಹಾಗೂ ಸಹಕಾರ ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದು, ಅವರ ಮೈಸೂರಿನ ಕುವೆಂಪುನಗರ ನಿವಾಸದಲ್ಲಿ ಶೋಕ ಮಡುಗಟ್ಟಿದ್ದು ನಾಯಕರುಗಳು ಹಾಗೂ ಅಭಿಮಾನಿಗಳು ಮನೆಗೆ ಧಾವಿಸುತ್ತಿದ್ದು ಅವರ ಜೀವನದ ಪಯಣದ ಒಂದು ನೋಟ ಇಲ್ಲಿದೆ.
ಸಚಿವರು ಪತ್ನಿ ಡಾ.ಗೀತಾ, ಮಗ ಗಣೇಶ್ ಪ್ರಸಾದ್ ಮತ್ತು ಮಗಳು ಹಾಗೂ ಅಳಿಯನನ್ನು ಅಗಲಿದ್ದಾರೆ. ಅಪಾರ ಅಭಿಮಾನಿಗಳನ್ನು, ಬೆಂಬಲಿಗರನ್ನು ಅಗಲಿದ್ದಾರೆ.
ಸಚಿವರ ಕುವೆಂಪು ನಗರದ ನಿವಾಸದಲ್ಲಿ ಪತ್ನಿ, ಹಾಗೂ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದ್ದು ಅವರ ಅಪಾರ ಅಭಿಮಾನಿಗಳು, ಬೆಂಬಲಿಗರು ಮನೆ ಮುಂದೆ ಜಮಾಯಿಸಿದ್ದಾರೆ. ಎಲ್ಲೆಲ್ಲೂ ಶೋಕ ಮಡುಗಟ್ಟಿದೆ. ಸೂತಕದ ಛಾಯೆ ಆವರಿಸಿದೆ. ಕುವೆಂಪು ನಗರದ ಅವರ ನಿವಾಸಕ್ಕೆ ಅವರ ಪಾರ್ಥಿವ ಶರೀರವನ್ನು ತರಲಾಗುತ್ತಿದ್ದು, ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಬಳಿಕ ಗುಂಡ್ಲುಪೇಟೆಗೆ ಕೊಂಡೊಯ್ದು ಅಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ನಿವಾಸಕ್ಕೆ ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ಮಗನ ಪ್ರತಿಕ್ರಿಯೆ: ಮಾಧ್ಯಮಗಳಿಗೆ ಅವರ ಮಗ ಗಣೇಶ್ ಪ್ರಸಾದ್ ಪ್ರತಿಕ್ರಿಯೆ ನೀಡಿ ಮಧ್ಯಾಹ್ನ 5 ರಿಂದ ಸಂಜೆ 7ಗಂಟೆಯವರೆಗೆ ಪಾರ್ಥಿವ ಶರೀರವನ್ನು ದರ್ಶನಕ್ಕೆ ಇರಿಸಲಾಗುತ್ತದೆ. ಬಳಿಕ ಗುಂಡ್ಲುಪೇಟೆಗೆ ಕೊಂಡೊಯ್ದು ಅಲ್ಲಿ ರಾತ್ರಿ 11 ಗಂಟೆಯವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಇರಿಸಲಾಗುವುದು. ಅಲ್ಲಿಂದ ಹಾಲಹಳ್ಳಿಗೆ ಕೊಂಡೊಯ್ದು ಬುಧವಾರ ಬೆಳಿಗ್ಗೆ 11 ಗಂಟೆಯವರೆಗೆ ಸಾರ್ವಜನಿಕರ ದರ್ಶಕ್ಕೆ ಇರಿಸಲಾಗುತ್ತಿದ್ದು, ಬಳಿಕ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದರು.
ನನ್ನ ಗಂಡ ಸತ್ತಿಲ್ಲ ಗೀತಾ ಮಹದೇವಪ್ರಸಾದ್: ಗಂಡನ ಸಾವಿನ ಸುದ್ದಿಯಿಂದ ಗಾಬರಿಗೊಂಡ ಗೀತಾ ಮಹದೇವಪ್ರಸಾದ್, ನನ್ನ ಗಂಡ ಸತ್ತಿಲ್ಲ, ನೀವೆಲ್ಲಾ ಇಷ್ಟೊಂದು ಜನ ಬಂದಿದ್ದೀರಿ ನನ್ನ ಗಂಡನನ್ನ ಕರೆದುಕೊಂಡು ಬನ್ನಿ ಎಂದು ದುಖಃ ತಪ್ತರಾಗಿ ಎಲ್ಲರ ಮುಂದೆ ಕೈಮುಗಿದು ನನ್ನ ಗಂಡನನ್ನ ಕರೆದುಕೊಂಡು ಬನ್ನಿ ಎಂದು ಗೋಗರೆಯುತ್ತಿರುವ ದೃಶ್ಯ ಮನಕಲಕುವಂತಿತ್ತು.
ಜಯದೇವದಲ್ಲಿ ಆಪರೇಷನ್: 2003 ರಲ್ಲಿ ಹೃದಯಘತವಾಗಿದ್ದು ಚೇತರಿಸಕೊಂಡ ನಂತರ, 2004 ರಲ್ಲಿ ಬೈಪಾಸ್ ಸರ್ಜರಿ ಮಾಡಲಾಗಿದ್ದು, 2016ರ ಏಪ್ರಿಲ್ ಅಂಜಿಯೋಗ್ರಾಮ್ ಮಾಡಲಾಗಿದ್ದು, ಆರೋಗ್ಯವಾಗಿದ್ದರು ಎಂದು ಮಗ ಗಣೀಶ್ ಪ್ರಸಾದ್ ಖಚಿತ ಪಡಿಸಿದ್ದು, ಈ ವಿಚಾರವನ್ನ ಜಯದೇವದ ನಿರ್ದೇಶಕ ಡಾ.ಮಂಜುನಾಥ್ ಸಹ ತಿಳಿಸಿದ್ದಾರೆ.
ರಾಜಕೀಯದ ಹಿನ್ನಲೆ: 1985ರಲ್ಲಿ ಜನತಾ ಪರಿವಾರದ ಮೂಲಕ ರಾಜಕೀಯ ಪ್ರವೇಶಿಸಿದ ಮಹದೇವ ಪ್ರಸಾದ್, 1985ರ ಚುನಾವಣೆಯಲ್ಲಿ ಹಾಗೂ 1989ರ ಚುನಾವಣೆಯಲ್ಲಿ ಸೋತರು. ನಂತರ 1994 ಜನತಾದಳದಿಂದ, 1994ರಲ್ಲಿ ಸಂಯುಕ್ತ ಜನತಾದಳದಿಂದ, 2004 ರಲ್ಲಿ ಜೆಡಿಎಸ್, 2009 ಹಾಗೂ 2014 ಕಾಂಗ್ರೆಸ್ ನಿಂದ ಗೆಲುವು ಸಾಧಿಸಿ ಸಕ್ಕರೆ ಮತ್ತು ಸಹಕಾರ ಸಚಿವರಾಗಿ, ಸಹಕಾರ ಕ್ಷೇತ್ರದಲ್ಲಿ ಉತ್ತಮ ಕೆಲಸವನ್ನು ಮಾಡುವ ಮೂಲಕ 5 ಬಾರಿ ಗೆಲುವನ್ನು ಸಾಧಿಸಿ ಸೋಲಿಲ್ಲದ ಸರದಾರ ಎಂಬ ಬಿರುದನ್ನು ಸಹ ಪಡೆದಿದ್ದರು. ಜೊತೆಗೆ ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರಲ್ಲಿ ಒಬ್ಬರಾಗಿದ್ದು ಅವರ ನಿರ್ಧಾರಗಳ ಹಿಂದಿನ ಶಕ್ತಿ ಕೂಡ ಇವರೇ ಆಗಿದ್ದರು.
ಗಣ್ಯರ ದಂಡು: ಅಗಲಿದ ಸಹಕಾರಿ ದುರೀಣಾ ಹೆಚ್.ಎಸ್ ಮಹದೇವಪ್ರಸಾದ್ ನಿಧನದ ಸುದ್ದಿ ತಿಳಯುತ್ತಿದಂತೆ ಕುವೆಂಪುನಗರದ ನಿವಾಸಕ್ಕೆ ಗಣ್ಯರ ದಂಡೇ ಆಗಮಿಸಿ ಕುಟುಂಬದವರಿಗೆ ಸಂತ್ವಾನ ಹೇಳಿದ ಗಣ್ಯರಲ್ಲಿ, ಸಚಿವರಾದ ಯು.ಟಿ ಖಾದರ್, ಮಾಜಿ ಸಂಸದ ವಿಶ್ವನಾಥ್, ಶಾಸಕರಾದ ಪಿರಿಯಾಪಟ್ಟಣ ಕೆ.ವೆಂಕಟೇಶ್, ಶಾಸಕ ವಾಸು, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಶಿವಣ್ಣ ಅಪಾರ ಅಭಿಮಾನಿಗಳು ಸೇರಿದಂತೆ ಹಲವಾರು ಗಣ್ಯರು ಮನೆಯ ಮುಂದೆ ಜಮಾಯಿಸಿದ್ದಾರೆ.
ಸಚಿವರ ಅಂತಿಮ ದರ್ಶನ ಪಡೆಯಲು ಇಂದು ಸಂಜೆ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ, ಬಿ.ಎಸ್ ಯಡಿಯೂರಪ್ಪ, ಸುತ್ತೂರು ಶ್ರೀಗಳಾದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿಗಳು ಸೇರಿದಂತೆ ಹಲವಾರು ಸಚಿವರು, ಸ್ವಾಮೀಜಿಗಳು ಆಗಮಿಸಲಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶ: ಸಚಿವರ ನಿಧನದ ಹಿನ್ನಲ್ಲೆಯಲ್ಲಿ ಇಂದು ಅವರ ಗೌರವಾರ್ಥ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮೃತ ಸಚಿವರ ಅಂತ್ಯ ಸಂಸ್ಕಾರ ಗುಂಡ್ಲುಪೇಟೆ ತಾಲ್ಲೂಕಿನ ಹಾಲನಹಳ್ಳಿ ಗ್ರಾಮದಲ್ಲಿ ನಡೆಯುವ ಹಿನ್ನಲೆಯಲ್ಲಿ ನಾಳೆ 04-01-17ರ ಬುಧವಾರ ಚಾಮರಾಜನಗರ ಜಿಲ್ಲೆಗೆ ಅನ್ವಯವಾಗುವಂತೆ ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಆದೇಶ ಹೊರಡಿಸಿದ್ದಾರೆ.