ಮೈಸೂರು: ಸೂರಿನ ಚಾಮರಾಜೇಂದ್ರ ಮೃಗಾಲಯಲಯಕ್ಕೆ ಇನ್ನು ಒಂದು ತಿಂಗಳ ಕಾಲ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. ಜ.4ರಿಂದ ಫೆ.2ರವರೆಗೆ ಪ್ರವೇಶವನ್ನು ನಿರ್ಬಂಧಿಸಿರುವುದಕ್ಕೆ ಇಲ್ಲಿನ ಹಕ್ಕಿಗಳಿಗೆ ಅವಿನ್ ಇನ್ಪ್ಲೂಜಾ- ಹೆಚ್5 ಎನ್ 8 ಎಂಬ ಸೋಂಕು ಕಾಣಿಸಿಕೊಂಡಿರುವುದು ಕಾರಣ ಎಂದು ತಿಳಿದು ಬಂದಿದೆ.
ಮೃಗಾಲಯ ಆಡಳಿತ ಮಂಡಳಿ ತುರ್ತು ಸಭೆ ನಡೆಸಿ ಸೋಂಕನ್ನು ಹತ್ತಿಕ್ಕುವ ಸಲುವಾಗಿ ವೈದ್ಯಕೀಯೋಪಚಾರ ನಡೆಸಲು ಅನುಕೂಲವಾಗುವಂತೆ ಈ ನಿರ್ಧಾರ ಕೈಗೊಂಡಿದೆ. ಡಿಸೆಂಬರ್ 28ರಂದು ಸ್ಪಾಟ್ಬಿಲೀಡ್ ಮತ್ತು 3ಗ್ರೆಲಾಗ್ ಗೂಸ್ ಗಳು ಸಾವನ್ನಪ್ಪಿದ್ದವು. ಇವುಗಳ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮಾದರಿಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಪ್ರಾಣಿಗಳ ಆರೋಗ್ಯ ಮತ್ತು ಪಶು ಜೈವಿಕ ಸಂಸ್ಥೆ(ಐಎಹೆಚ್ ಮತ್ತು ವಿಬಿ)ಗೆ ಕಳುಹಿಸಲಾಗಿತ್ತು. ಅಲ್ಲಿಂದ ಬಂದಿರುವ ವರದಿಯಲ್ಲಿ ಹಕ್ಕಿಗಳಿಗೆ ಹಕ್ಕಿಜ್ವರದ ಅವಿನ್ ಇನ್ಪ್ಲೂಜಾ- ಹೆಚ್5 ಎನ್ 8 ಸೋಂಕು ಇರುವುದು ಪತ್ತೆಯಾಗಿದೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ತುರ್ತು ಕ್ರಮ ಕೈಗೊಂಡಿರುವ ಮೃಗಾಲಯ ಆಡಳಿತ ಮಂಡಳಿ ಮೃಗಾಲಯದಲ್ಲಿರುವ ಪಕ್ಷಿ ಮತ್ತು ಪ್ರಾಣಿಗಳಿಗೆ ವೈದ್ಯೋಪಚಾರ ಸೇರಿದಂತೆ ಕ್ರಿಮಿನಾಶಕ ಸಿಂಪಡಣೆ ಸೇರಿದಂತೆ ಇನ್ನಿತರ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಸಾರ್ವಜನಿಕರ ಪ್ರವೇಶವನ್ನು ಒಂದು ತಿಂಗಳ ಕಾಲ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಿದೆ.
ಸೋಂಕು ಒಂದು ಪಕ್ಷಿಯಿಂದ ಮತ್ತೊಂದು ಪಕ್ಷಿ, ಪ್ರಾಣಿಗಳಿಗೆ ಹರಡದಂತೆ ತಡೆಯಲು ಈಗಾಗಲೇ ಇಲ್ಲಿನ ಸಿಬ್ಬಂದಿಗಳು ಕೈಕಾಲಿಗೆ ಗ್ಲೌಸ್ ಮತ್ತು ಕವಚಗಳನ್ನು ಧರಿಸಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶೀಘ್ರವೇ ಪರಿಸ್ಥಿತಿ ಹತೋಟಿಗೆ ಬರಲಿದ್ದು ಬಳಿಕ ಎಂದಿನಂತೆ ಮೃಗಾಲಯದ ಭೇಟಿಗೆ ಅವಕಾಶ ದೊರೆಯಲಿದೆ.