ಚಾಮರಾಜನಗರ: ನಿಧನರಾದ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರ ಅಂತ್ಯಕ್ರಿಯೆಯು ಹುಟ್ಟೂರಾದ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯ ಹಾಲಹಳ್ಳಿ ಗ್ರಾಮದಲ್ಲಿರುವ ಅವರ ತೋಟದಲ್ಲಿ ಸಂಜೆ ವೇಳೆಗೆ ನಡೆಯಲಿದೆ.
ಸಚಿವ ಮಹದೇವಪ್ರಸಾದ್ ಅವರ ತಂದೆ ದಿ.ಶ್ರೀಕಂಠಶೆಟ್ಟರ ಮತ್ತು ತಾಯಿ ವೀರಮ್ಮ ಅವರ ಸಮಾಧಿಯ ಪಕ್ಕದಲ್ಲಿ ಸಚಿವ ಮಹದೇವಪ್ರಸಾದ್ ಅವರ ಅಂತ್ಯಕ್ರಿಯೆ ನೆರವೇರಿಸಲು ಸಕಲ ರೀತಿಯಲ್ಲೂ ಸಜ್ಜುಗೊಳಿಸಲಾಗಿದೆ. ಬುಧವಾರ ಬೆಳಗ್ಗೆ 11.30ಕ್ಕೆ ವೀರಶೈವ ಸಂಪ್ರದಾಯದಂತೆ ವಿವಿಧ ಮಠಾಧೀಶರ ನೇತೃತ್ವದಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆದಿದ್ದು ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.
ತೋಟದಲ್ಲಿ ಎಲ್ಲ ರೀತಿಯ ಕಾರ್ಯಗಳು ಜರುಗುತ್ತಿದ್ದು, ಅಗತ್ಯ ಪೂರ್ವ ಸಿದ್ಧತಾ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಅಂತ್ಯಕ್ರಿಯೆಯಲ್ಲಿ ಹೆಚ್ಚಿನ ಜನರು ಸೇರುವುದರಿಂದ ತೋಟದ ಸುತ್ತಲೂ ನೆಲವನ್ನು ಸಮತಟ್ಟು ಮಾಡಿ ಶುಚಿಗೊಳಿಸಲಾಗುತ್ತಿದೆ. ಈಗಾಗಲೇ ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ತಮ್ಮೂರಿನ ರಾಜ ಇನ್ನಿಲ್ಲವೆಂಬ ಶೋಕ ಮಡುಗಟ್ಟಿದ್ದು, ಇಡೀ ಗ್ರಾಮಕ್ಕೆ ಗ್ರಾಮವೇ ನೀರವ ಮೌನಕ್ಕೆ ಜಾರಿದೆ. ಸೋಲಿಲ್ಲದ ಸರದಾರರಾಗಿದ್ದ ಮಹದೇವಪ್ರಸಾದ್ ಸಾವನಪ್ಪಿದ್ದಾರೆ ಎಂಬ ಸುದ್ದಿ ಗ್ರಾಮದ ಜನತೆಗೆ ನಂಬಲು ಸಾಧ್ಯವಾಗುತ್ತಿಲ್ಲ.
ಹಾಲಹಳ್ಳಿಯ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದ್ದ ಸಚಿವರು ಗ್ರಾಮದಲ್ಲಿನ ರಸ್ತೆ, ಶಾಲೆ, ಕುಡಿಯುವ ನೀರಿನ ಸೌಕರ್ಯ, ಚರಂಡಿ ವ್ಯವಸ್ಥೆ ಸೇರಿದಂತೆ ಇಡೀ ಗ್ರಾಮದಲ್ಲಿ ಮುಲಭೂತ ಸೌಕರ್ಯವನ್ನು ಮಾಡಿದ್ದಾರೆ. ಅಂತ್ಯಕ್ರಿಯೆಗೆ ಮಂಗಳವಾರವೇ ಸಿದ್ಧತೆಯನ್ನು ಮಾಡಲಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಬಿ.ರಾಮು ಭೇಟಿ ನೀಡಿದ್ದು ಸಕಲ ರೀತಿಯಲ್ಲೂ ಜಿಲ್ಲಾಡಳಿತದ ವತಿಯಿಂದ ಪೂರ್ವ ಸಿದ್ಧತೆ ಮಾಡಿದ್ದರು.