ಮೈಸೂರು: ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿ ಕಾಣಿಸಿಕೊಂಡಿರುವ ಹೆಚ್5ಎನ್8 ನಿಯಂತ್ರಣಕ್ಕಾಗಿ ಒಂದು ತಿಂಗಳಕಾಲ ಮೃಗಾಲಯವನ್ನ ಬಂದ್ ಮಾಡಿರುವ ಹಿನ್ನಲ್ಲೆಯಲ್ಲಿ ಅರಣ್ಯ ಸಚಿವರು ದೀಡಿರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಪಕ್ಷಿಗಳಿಲ್ಲಿ ಪತ್ತೆಯಾದ ಹೆಚ್5ಎನ್8 ಮಾರಕ ರೋಗದ ಸಂಪೂರ್ಣ ವಿವರವನ್ನ ಪಡೆಯಲು ಆಗಮಿಸಿದ ಅರಣ್ಯ ಸಚಿವ ರಮಾನಥ ರೈ, ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಸಂಪೂರ್ಣ ವಿವರ ಪಡೆದು ನಂತರ ಒಂದು ತಿಂಗಳ ಕಾಲ ಪ್ರವಾಸಿಗರಿಗೆ ನಿರ್ಭಂದ ವಿಧಿಸಿರುವ ಬಗ್ಗೆಯೂ ಸಹ ಕಾರ್ಯ ನಿರ್ವಹಕ ನಿರ್ದೇಶಕಿ ಕಮಲಾಕರಿಕಳಾನ್ ಅವರಿಂದ ವಿವರ ಪಡೆದರು.
ನಂತರ ಮಾತನಾಡಿದ ಸಚಿವರು, ಮೃಗಾಲಯದ ಪಕ್ಷಿಗಳು ಹಾಗೂ ಪ್ರಾಣಿಗಳ ಹಿತ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪಕ್ಷಿಗಳ ಮಾದರಿಯನ್ನ ಪ್ರಯೋಗಾಲಯಗಳಿಗೆ ರವಾನೆ ಮಾಡಲಾಗಿದೆ. ನೆಗೆಟಿವ್ ವರದಿ ಬಂದರೆ ಮಾತ್ರ ಮೃಗಾಲಯವನ್ನು ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.