ಮೈಸೂರು: ಮಾನಸಗಂಗೋತ್ರಿಯ ಇತಿಹಾಸ ಅಧ್ಯಯಯನ ವಿಭಾಗದ ವತಿಯಿಂದ ರಾಣಿಬಹದ್ದೂರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 3 ದಿನಗಳ ‘ಕರ್ನಾಟಕ ಇತಿಹಾಸ ಕಾಂಗ್ರೆಸ್ ನ 26 ನೇ ಸಮ್ಮೇಳನ’ಕ್ಕೆ ಶುಕ್ರವಾರ ಚಾಲನೆ ನೀಡಲಾಗಿದ್ದು, ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶತಮಾನೋತ್ಸವದ ಸಂದರ್ಭದಲ್ಲಿ ಇದೊಂದು ಉತ್ತಮ ಶೈಕ್ಷಣಿಕ ಚಟುವಟಿಕೆ ಆಗಿದೆ. ಕರ್ನಾಟಕವು ಕಲೆ, ಸಾಹಿತ್ಯ, ವಾಸ್ತುಶಿಲ್ಪಕ್ಕೆ ತವರಾಗಿದ್ದು, ನಮ್ಮ ಸಂಸ್ಕೃತಿಗೆ ಬಹಳಷ್ಟು ಕೊಡುಗೆಗಳನ್ನು ನೀಡಿದೆ. ಬೇಲೂರು, ಹಳೇಬೀಡು, ಸೋಮನಾಥಪುರ, ಐಹೊಳೆ ಇನ್ನಿತರ ಪ್ರೇಕ್ಷಣೀಯ ಸ್ಥಳಗಳು ವಾಸ್ತುಶಿಲ್ಪದ ತವರಾಗಿವೆ ಎಂದು ಹೇಳಿದರು.
ಮೈಸೂರು ಸಹ ಸಾಂಸ್ಕೃತಿಕ ನಗರಿಯಾಗಿದ್ದು, ಕಲಾ ಪ್ರಿಯರಿಗೆ ಅದ್ಭುತ ತಾಣವಾಗಿದೆ. ಒಡೆಯರು ಕಲಾ ಕ್ಷೇತ್ರದಲ್ಲಿ ಮೈಸೂರಿಗೆ ಅಗಾಧ ಕೊಡುಗೆ ನೀಡಿದ್ದಾರೆ ಮೈಸೂರು ವಿವಿಯು ಮಹೋನ್ನತ ಸಂಸ್ಥೆಯಾಗಿದ್ದು, ಹಲವಾರು ಸಂಪನ್ಮೂಲ ವ್ಯಕ್ತಿಗಳ ಹುಟ್ಟಿಗೆ ಕಾರಣವಾಗಿದೆ ಎಂದು ಹೇಳಿದರು.
ನಂತರ ಮಾತನಾಡಿದ ಕರ್ನಾಟಕ ಇತಿಹಾಸ ಕಾಂಗ್ರೆಸ್ ನ ಸಂಸ್ಥಾಪಕ ಪ್ರೊ.ಬಿ.ಷೇಕ್ ಅಲಿ, ಕರ್ನಾಟಕವು ಶ್ರೀಮಂತ ಇತಿಹಾಸವನ್ನು ಒಳಗೊಂಡಿದೆ. ಕಲೆ, ವಾಸ್ತುಶಿಲ್ಪ,ಸಾಹಿತ್ಯ, ಸಂಗೀತ, ತತ್ವಶಾಸ್ತ್ರದಲ್ಲಿ ಭಾರತೀಯ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದೆ. ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯರು ಧಾರ್ಮಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಮೈಸೂರು ಒಡೆಯರಾದ ನಾಲ್ವಡಿ ಕೃಷ್ಣರಾಜ ಒಡೆಯರು ಮಹಾತ್ಮ ಗಾಂಧೀಜಿಯಂತೆ ರಾಮರಾಜ್ಯದ ಕನಸನ್ನು ಕಂಡಿದ್ದರು. ಹಲವಾರು ದಿವಾನರು ಮೈಸೂರು ಸಂಸ್ಥಾನದ ಏಳಿಗೆಗಾಗಿ ಶ್ರಮಿಸಿದ್ದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಧಿವೇಶನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಮತ್ತು ಕಳೆದ ವರ್ಷದ ಸಂಶೋಧನಾ ಲೇಖನಗಳನ್ನು ಬಿಡುಗಡೆ ಮಾಡಲಾಯಿತು. ಕರ್ನಾಟಕ ಇತಿಹಾಸ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಮುನಿರಾಜಪ್ಪ, ಮೈಸೂರು ವಿವಿಯ ಕುಲಸಚಿವ ಪ್ರೊ.ಆರ್. ರಾಜಣ್ಣ, ಗುಲ್ಬರ್ಗಾ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಸಿ.ಮಹಾಬಲೇಶ್ವರಪ್ಪ, ಆರ್.ಎಂ.ಷಡಕ್ಷರಿ, ಪ್ರೊ.ಕೆ.ಸದಾಶಿವ, ಪ್ರೊ.ವೈ.ಹೆಚ್.ನಾಯಕವಾಡಿ ಮತ್ತಿತರ ಗಣ್ಯರು ಭಾಗಿಯಾಗಿದ್ದರು.