ಮೈಸೂರು: ಮಕ್ಕಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಸೇರಿಸಿದರೆ ಉತ್ತಮ ಜೀವನ ಶೈಲಿಯನ್ನು ಕಲಿಯುತ್ತಾರೆ. ನಿಮ್ಮ ಮಕ್ಕಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಸೇರಿಸಿ ಎಂದು ಪೋಷಕರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಕರೆ ನೀಡಿದರು.
ಮೈಸೂರಿನ ವಾರ್ತಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 17ನೇ ಜಾಂಬೂರಿ ಉತ್ಸವ ಯಶಸ್ವಿಯಾಗಲು ಸಹಕರಿಸಿದ ಜಿಲ್ಲಾಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು. ಜಾಂಬೂರಿ ಉತ್ಸವ ಯಶಸ್ವಿಯಾಗಲು ಮೈಸೂರಿನ ಜನತೆ ಕಾರಣಕರ್ತರಾಗಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ನಡೆಸಿದ ಉತ್ಸವದಲ್ಲಿ ರಾಜಸ್ಥಾನ ತಂಡ ಪ್ರಥಮ ಬಹುಮಾನ ಗಳಿಸಿದ್ದು, ಉತ್ತರ ಪ್ರದೇಶ ದ್ವಿತೀಯ ಬಹುಮಾನ ಪಡೆದಿದೆ ಎಂದು ತಿಳಿಸಿದರು. ಮಕ್ಕಳಿಗೆ 21ಲಕ್ಷರೂ. ವಿಮೆ ಮಾಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಮುಖ್ಯವಾಗಿ ಅಡಕನಹಳ್ಳಿ ಮತ್ತು ತಾಂಡವಪುರದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರು ಜಾಂಬೂರಿ ಉತ್ಸವ ಯಶಸ್ವಿಯಾಗಲು ಅವರೂ ಕೂಡ ಕಾರಣ ಎಂದರು.
ಉತ್ಸವದಲ್ಲಿ ವಿವಿಧ ರಾಜ್ಯಗಳ ಮೂವತ್ತು ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಗರ ಪರ್ಯಟನೆಗೆ ಕೊಡಲಾದ 100 ಸೈಕಲ್ ಗಳಲ್ಲಿ 99 ಸೈಕಲ್ ಇದೆ. ಇನ್ನೊಂದು ಇಲ್ಲ. ಇದನ್ನು ಬಿಟ್ಟರೆ ಬೇರೆ ಯಾವುದೇ ಘಟನೆಗಳು ನಡೆಯದೆ ಜಾಂಬೂರಿ ಉತ್ಸವ ಯಶಸ್ವಿಯಾಗಿದೆ ಎಂದರು. ಕರ್ನಾಟಕದಲ್ಲಿ 1960ರಲ್ಲಿ, 1986ರಲ್ಲಿ ಇದೀಗ 2016-17ರಲ್ಲಿ ಜಾಂಬೂರಿ ಉತ್ಸವ ನಡೆದಿದೆ. ಪ್ರತಿದಿನ 800-1000 ವಿದ್ಯಾರ್ಥಿಗಳನ್ನು ವೈದ್ಯವೃಂದ ತಪಾಸಣೆ ನಡೆಸಿತ್ತು ಎಂದು ತಿಳಿಸಿದರು.
17ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಗಳನ್ನು ತೆರೆಯಲು ತಿಳಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ ಎನ್ನುವುದೇ ಪ್ರಮುಖ ಉದ್ದೇಶ ಎಂದರು. ಮಕ್ಕಳನ್ನು ಪೋಷಕರು ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಸೇರಿಸಿದಲ್ಲಿ ಅವರ ಭವಿಷ್ಯ ಉಜ್ವಲವಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಾಂಬೂರಿ ಉತ್ಸವ ಸಮಿತಿಯ ಕಾರ್ಯದರ್ಶಿ ವಿಶ್ವನಾಥ, ಮುಖ್ಯಕಾರ್ಯದರ್ಶಿ ಚಿನ್ನಸ್ವಾಮಿ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.