ಮೈಸೂರು: ನಗರದ ವಿಶ್ವ ಕ್ಷೇಮ ಚಾರಿಟಬಲ್ ಟ್ರಸ್ಟ್ ನ ವತಿಯಿಂದ ಪ್ರಾಣಿ ಮತ್ತು ಪಕ್ಷಿಗಳ ಉಳಿವಿಗಾಗಿ ಮಹಾ ಮೃತ್ಯುಂಜಯ ಯಾಗ, ಗಣ ಹೋಮ, ಧನ್ವಂತರಿ , ಹೋಮ, ಹವನ, ಯಾಗ ಮಾಡಿಸುವ ಮೂಲಕ ಪ್ರಾಣಿ, ಪಕ್ಷಿಗಳ ರಕ್ಷಣೆಗೆ ಪ್ರಾರ್ಥಿಸಲಾಯಿತು.
ಮೃಗಾಲಯದ ಮುಂಭಾಗದಲ್ಲಿ ಮಂಜುನಾಥ್ ಶಾಸ್ತ್ರಿ, ಪ್ರಹ್ಲಾದ್, ರಾಜಗೋಪಾಲ್ ಅಯ್ಯಂಗಾರ್ ರವರ ನೇತೃತ್ವದಲ್ಲಿ ವಿಘ್ನ ನಿವಾರಕ ವಿನಾಯಕನಿಗೆ ಪೂಜೆ ನೆರವೇರಿಸಿ ಬಳಿಕ ವಿವಿಧ ಹೋಮ ಯಾಗ ಮಾಡಿ, ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದ ನಡುವೆ ನಡೆಯುತ್ತಿರುವ ಶೀತಲ ಸಮರ ಕೊನೆಯದಾಗಲಿ, ಜತೆಗೆ ಪ್ರಾಣಿ ಪಕ್ಷಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರಕ್ಷಿಸುವಂತೆಯೂ ದೇವರಲ್ಲಿ ಬೇಡಿಕೊಳ್ಳಲಾಯಿತು.
ಸುಮಾರು 125 ವರ್ಷಗಳ ಇತಿಹಾಸವಿರುವ ಮೈಸೂರಿನ ಐತಿಹಾಸಿಕ ಶ್ರೀಚಾಮರಾಜೇಂದ್ರ ಮೃಗಾಲಯವನ್ನು ಇದೇ ಮೊದಲ ಬಾರಿಗೆ ಒಂದು ತಿಂಗಳ ಕಾಲ ಬಂದ್ ಆಗುತ್ತಿದೆ. 125ನೇ ವರ್ಷಾಚರಣೆ ಸಿದ್ಧತೆಯಲ್ಲಿ ತೊಡಗಿರುವ ಸಂದರ್ಭದಲ್ಲಿಯೇ ಹಕ್ಕಿ ಜ್ವರದ ಭೀತಿ ಆವರಿಸಿರುವುದು ಸಂಭ್ರಮದ ನಡುವೆ ಸೂತಕ ತಂದಿಟ್ಟಿದೆ. ಮೃಗಾಲಯದಲ್ಲಿ ಹಕ್ಕಿ ಜ್ವರ ಭೀತಿ ಆವರಿಸಿರುವ ಕುರಿತು ಶಂಕೆ ಇರುವುದರಿಂದ ಮೃಗಾಲಯದಲ್ಲಿ ವಲಸೆ ಹಕ್ಕಿಗಳು ಮೃತಪಟ್ಟಿವೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಆಂಡ್ ಅನಿಮಲ್ ಡಿಸೀಸ್ (ಎನ್ಐಎಚ್ಎಸ್ಎಡಿ) ಸಂಸ್ಥೆಯು ಮೃತಪಟ್ಟ ಹಕ್ಕಿಗಳಲ್ಲಿ ಎಚ್5ಎನ್8 ವೈರಾಣು ಇರುವುದನ್ನು ದೃಢಪಡಿಸಿರುತ್ತದೆ. ಹೀಗಾಗಿ ಹಿನ್ನೆಲೆಯಲ್ಲಿ ಮೃಗಾಲಯವನ್ನು ಬಂದ್ ಮಾಡಲು ಮೃಗಾಲಯ ಆಡಳಿತ ಮಂಡಳಿ ನಿರ್ಧರಿಸಿದೆ. ಹೀಗಾಗಿ ಇದೇ ಜನವರಿ 4 ರಿಂದ ಫೆಬ್ರವರಿ 2ರವರೆಗೆ ಮೃಗಾಲಯವನ್ನು ಬಂದ್ ಮಾಡಲಾಗಿದ್ದು ಇದರಿಂದ ಕೋಟ್ಯಂತರ ರೂ ನಷ್ಟವಾಗಿದೆ ಎಂದು ಟ್ರಸ್ಟ್ ನ ಪದಾಧಿಕಾರಿಗಳು ಅಳಲು ತೋಡಿಕೊಂಡರು.
ಪೂಜಾ ಕೈಂಕರ್ಯ ನೆರವೇರಿಸಿ ಮಾತನಾಡಿದ ಮಂಜುನಾಥ್ ಶಾಸ್ತ್ರಿ ಅವರು ಮೃತ್ಯುಂಜಯ ಹೋಮದಿಂದ ಪ್ರಾಣಿ ಪಕ್ಷಿಗಳ ಆಯಸ್ಸು ವೃದ್ಧಿ ಹಾಗೂ ಧನ್ವಂತರಿ ಹೋಮ ದಿಂದ ಪ್ರಾಣಿ ಪಕ್ಷಿಗಳಿಗೆ ನೀಡುವ ಔಷಧಿ ಸಮರ್ಪಕವಾಗಿ ಕೆಲಸ ಮಾಡಲಿ ಮತ್ತು ಗಣ ಹೋಮದಿಂದ ಆಡಳಿತ ಮಂಡಳಿ ಮತ್ತು ವೈದ್ಯ ರು ಮಾಡುವ ಕೆಲಸ ಸುಗಮವಾಗಿ ನಡೆಯಲಿ ಮತ್ತು ಹಿಂದಿನ ಕಾಲದಿಂದಲೂ ಕೂಡ ವೈದ್ಯರ ಮೊರೆ ಜೊತೆ ದೇವರ ಮೊರೆ ಹೊಗುವುದು ಸೂಕ್ತ ಹಾಗಾಗಿ ಪೂಜಾ ಕಾರ್ಯಮಾಡಿ ಲೋಕಾಭಿವೃದ್ಧಿಯಾಗುವಂತೆ ಆಶಿಸಿದರು.
ಯುವಭಾರತ್ ನ ಸಂಚಾಲಕ ಜೋಗಿಮಂಜು, ವಿಪ್ರ ಯುವ ವೇದಿಕೆ ಯ ಪ್ರಧಾನ ಕಾರ್ಯದರ್ಶಿ ವಿಕ್ರಮ್, ಇಟ್ಟಿಗೆ ಗೂಡು ಕನ್ನಡ ಸಂಘದ ಅಧ್ಯಕ್ಷ ನೀಲಕಂಠ, ಜಯಕರ್ನಾಟಕ ಯುವ ಅಧ್ಯಕ್ಷ ಅಜಯ್ ಶಾಸ್ತ್ರಿ, ಶ್ರೀಧರ್ ಮೂರ್ತಿ, ವಿನಯ್ ಕಣಗಾಲ್, ಜಗದೀಶ ಕಡಕೋಳ ಹಾಗೂ ಸ್ಥಳೀಯರು ಇದ್ದರು.