ಮೈಸೂರು: ಆರು ದಿನಗಳ ಕಾಲ ಮೈಸೂರಿನ ರಂಗಾಯಣದಲ್ಲಿ ನಡೆಯಲಿರುವ ಬಹುರೂಪಿ ನಾಟಕೋತ್ಸವಕ್ಕೆ ಶುಕ್ರವಾರ ವನರಂಗದಲ್ಲಿ ಶ್ರೀಲಂಕಾದ ಖ್ಯಾತ ರಂಗನಿರ್ದೇಶಕ ಪರಾಕ್ರಮ ನಿರೆಯಲ್ಲ ಅವರು ಇಂದ್ರಧ್ವಜ ಅನಾವರಣಗೊಳಿಸಿ ಚಾಲನೆ ನೀಡಿದ್ದಾರೆ. ಈ ಸುಂದರ ಅದ್ಧೂರಿ ಕಾರ್ಯಕ್ರಮಕ್ಕೆ ಹಲವು ಗಣ್ಯರು ಸಾಕ್ಷಿಯಾದರು.
ರಂಗಭೂಮಿ, ನಾಟಕ ಇನ್ನಿತರ ಕಲೆಗಳಲ್ಲಿ ಆಸಕ್ತಿಯಿರುವ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ಸಂಪ್ರದಾಯದಂತೆ ವೇದಿಕೆ ಕಾರ್ಯಕ್ರಮ ನಡೆಯಿತು. ಎಂದಿನಂತೆ ಸ್ವಾಗತ, ಅಧ್ಯಕ್ಷ, ಮುಖ್ಯ ಅತಿಥಿಗಳ ಭಾಷಣವೂ ನಡೆಯಿತು. ಇದರೊಂದಿಗೆ ಶ್ರೀಲಂಕಾದ ಖ್ಯಾತ ರಂಗನಿರ್ದೇಶಕ ಪರಾಕ್ರಮ ನಿರೆಯಲ್ಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೆಲ್ಲದರ ನಡುವೆ ನೆರೆದ ಅಭಿಮಾನಿಗಳು ಹುಚ್ಚೆದ್ದು ಕುಣಿಯುವ ಅವಕಾಶವೂ ದೊರೆಯಿತು. ರಂಗಭೂಮಿ, ಚಲನಚಿತ್ರ, ರಾಜಕೀಯ ಕ್ಷೇತ್ರಗಳಲ್ಲಿ ಸೈ ಎನಿಸಿಕೊಂಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿದರು. ಅದಾದ ನಂತರ ಒಂದು ರಸಮಯ ಕ್ಷಣ ನೆರದವರಿಗೆ ಎದುರಾಯಿತು. ವೇದಿಕೆಗೆ ಬಂದ ರಂಗ ಕಲಾವಿದೆ, ಗಾಯಕಿ ಬಿ.ಜಯಶ್ರೀ ತಮ್ಮ ಕಂಚಿನ ಕಂಠದಲ್ಲಿ ರಂಗಗೀತೆಯನ್ನು ಹಾಡತೊಡಗಿದರು. ಅದಕ್ಕೆ ಪ್ರೇಕ್ಷಕರು ಮಾತ್ರವಲ್ಲ ಸಚಿವೆ ಉಮಾಶ್ರೀ ಕೂಡ ಹೆಜ್ಜೆ ಹಾಕಿದರು. ಅವರು ಹೆಜ್ಜೆ ಹಾಕಿದ ಆ ಕ್ಷಣಗಳು ಹೇಗಿತ್ತು ಎಂಬುದನ್ನು ಚಿತ್ರದಲ್ಲಿ ನೋಡಿ ಖುಷಿ ಪಡಬಹುದು.