ಮೈಸೂರು:ಪತ್ರಕರ್ತರು ಒತ್ತಡದ ನಡುವೆಯೂ ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕೆಂದು ಪತ್ರಕರ್ತರಿಗೆ ಕನಕಗಿರಿಯ ಮಲೆಯೂರಿ ಶ್ರೀಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಸಲಹೆ ನೀಡಿದರು.
ಪತ್ರಕರ್ತರ ಭವನದಲ್ಲಿ 2017ನೇ ಸಾಲಿನ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ದಿನಚರಿ ಹಾಗೂ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬೆಂಗಳೂರಿಗಿಂತಲೂ ದೇಶದ ಮಾದರಿ ಮತ್ತು ಸಾಂಸ್ಕೃತಿಕ ನಗರಿ ಎಂದೇ ಖ್ಯಾತಿ ಹೊಂದಿರುವ ಮೈಸೂರಿಗೆ ಕಳೆದ ಕೆಲ ವರ್ಷಗಳಿಂದಲೂ ಸಂಕಷ್ಟಗಳ ಸರಮಾಲೆಯೇ ಎದುರಾಗಿದ್ದು ಅಂತಹ ಸಮಯದಲ್ಲಿ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಲು ಪತ್ರಕರ್ತರ ಸೇವೆ ಶ್ಲಾಘನೀಯವಾಗಿದೆ.
ಸಾರ್ವಜನಿಕರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಸಂಕುಚಿತ ಮನೋಭಾವನೆ ತೊಲಗಲಿ, ಸ್ವಚ್ಛ ಭಾರತದೊಂದಿಗೆ ಮನಸ್ಸನ್ನು ಸ್ವಚ್ಛವಾಗಿಸಿಕೊಂಡು ಮನ ಪರಿವರ್ತನೆಗೊಳಿಸಿಕೊಳ್ಳುವುದು ಅಗತ್ಯವಾಗಿದ್ದು ಆಗುವ ಅನಾಹುತಗಳು ಕುಂಠಿತವಾಗುವುದು ಎಂದು ಆಶಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ ಆರಂಭದಲ್ಲಿ ಕೇವಲ 60 ಸದಸ್ಯತ್ವ ಹೊಂದಿದ್ದ ಸಂಘವೂ 325ಕ್ಕೆ ಏರಿದ್ದು ಪತ್ರಕರ್ತರು ಒಗ್ಗಟ್ಟಿನಿಂದಿರಬೇಕು ಹಾಗೂ ಪತ್ರಕರ್ತರ ಸರ್ವಾಂಗೀಣ ಅಭ್ಯುದಯಕ್ಕೆ ಸಹಕಾರ ಸಂಘವೂ ಪ್ರಸಕ್ತ ಸಾಲಿನಲ್ಲಿ ಸ್ಥಾಪನೆಯಾಗುತ್ತಿದ್ದು ಶೀಘ್ರದಲ್ಲಿಯೇ ಉದ್ಘಾಟನೆಗೊಳ್ಳಲಿದೆ.
ಈಗಾಗಲೇ 5 ಲಕ್ಷ ರೂಪಾಯಿ ಷೇರುಗಳು ಶೇಖರಣೆಗೊಂಡಿದ್ದು, ಸಹಕಾರ ಸಂಘದ ಸದಸ್ಯತ್ವ ಹೊಂದಿದವರಿಗೆ ಮುಂದಿನ ದಿನಗಳಲ್ಲಿ ಸಾಲದ ರೂಪದಲ್ಲಿ ಆರ್ಥಿಕ ಸಹಾಯ, ಮಕ್ಕಳಿಗೆ ಶೈಕ್ಷಣಿಕ ಸಾಲ, ಆರೋಗ್ಯ ವಿಮೆ ಸೇರಿದಂತೆ ಹಲವಾರು ಸವಲತ್ತುಗಳು ಲಭಿಸಲಿದೆ. ಬಡ ಮಕ್ಕಳನ್ನು ದತ್ತು ಪಡೆದು ಶಿಕ್ಷಣಕ್ಕೆ ಧನ ಸಹಾಯ ಮಾಡಲಾಗುತ್ತಿದೆ ಎಂದು ತಿಳಿಸಿದರು.