ಮೈಸೂರು: ಶಾಲೆಯ ಸುತ್ತಮುತ್ತ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡದಿದ್ದರೆ ವಿಷಜಂತುಗಳು ಶಾಲಾ ಕೊಠಡಿಯಲ್ಲಿ ವಾಸ್ತವ್ಯ ಹೂಡುವುದರಲ್ಲಿ ಸಂಶಯವಿಲ್ಲ ಎನ್ನುವುದಕ್ಕೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಯ ಕೊಠಡಿಯಲ್ಲಿ ಕಾಣಿಸಿಕೊಂಡ ನಾಗರಹಾವೇ ಸಾಕ್ಷಿಯಾಗಿದೆ.
ಕೊಠಡಿಯಲ್ಲಿ ಬೆಚ್ಚನೆ ಮಲಗಿದ್ದ ಹಾವನ್ನು ಶಿಕ್ಷಕಿ ನೋಡಿದ್ದರಿಂದ ತಕ್ಷಣ ಮಕ್ಕಳನ್ನು ಗಾಬರಿ ಮಾಡದೆ ಹೊರಕ್ಕೆ ಕಳುಹಿಸಿ ಬಳಿಕ ಹಾವು ಹಿಡಿಯುವರನ್ನು ಕರೆಯಿಸಿ ಸೆರೆ ಹಿಡಿದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಇಷ್ಟಕ್ಕೂ ನಡೆದಿದ್ದೇನೆಂದರೆ ಶುಕ್ರವಾರ ಮಧ್ಯಾಹ್ನ 3.30ರ ಸಮಯದಲ್ಲಿ ಒಂದನೇ ತರಗತಿಯ ಶಿಕ್ಷಕಿ ಮೇರಿ ಎಂಬುವರು ಪಾಠ ಮಾಡುತ್ತಿದ್ದಾಗ ಕೊಠಡಿಯೊಳಗೆ ನಾಗರಹಾವು ಮಲಗಿರುವುದು ಕಾಣಿಸಿದೆ.
ಕೂಡಲೇ ಅವರು ಮಕ್ಕಳಿಗೆ ನೀವೆಲ್ಲ ಹೊರಗೆ ಹೋಗಿ ಎಂದು ಉಪಾಯದಿಂದ ಹೊರಗೆ ಕಳುಹಿಸಿದ್ದಾರೆ. ಬಳಿಕ ಕೊಠಡಿಯ ಬಾಗಿಲು ಮುಚ್ಚಿ ಮುಂದೇನು ಎಂದು ಯೋಚಿಸುತ್ತಿರುವಾಗಲೇ ಹಾವು ಸೆರೆಹಿಡಿಯುವುದರಲ್ಲಿ ಹೆಸರುವಾಗಿಯಾಗಿರುವ ಚಂದ್ರು ಅವರ ನೆನಪಾಗಿದೆ. ಅವರ ದೂರವಾಣಿ ನಂಬರ್ ಪಡೆದು ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಸ್ನೇಕ್ ಚಂದ್ರು ಅವರು ಭಾರೀ ಗಾತ್ರದ ನಾಗರಹಾವನ್ನು ಸೆರೆ ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಹಾವು ನೋಡಿ ಭಯಭೀತರಾಗಿದ್ದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ್ದಾರೆ.
ಒಂದು ವೇಳೆ ಹಾವಿರುವುದನ್ನು ಶಿಕ್ಷಕಿ ಗಮನಿಸದೆ ಹೋಗಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿತ್ತು. ಶಾಲೆಯ ಸುತ್ತಮುತ್ತ ಸ್ವಚ್ಛತೆಯ ಕೊರತೆ ಹಾಗೂ ಗಿಡಗಂಟಿಗಳು ಬೆಳೆದಿರುವುದೇ ವಿಷ ಜಂತುಗಳು ಶಾಲೆಯೊಳಗೆ ಬರಲು ಕಾರಣ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಇನ್ನಾದರೂ ಶಾಲಾ ಅಭಿವೃದ್ಧಿ ಮಂಡಳಿ ಶ್ರಮದಾನದ ಮೂಲಕವಾದರೂ ಶಾಲೆಯ ಸುತ್ತಮುತ್ತ ಇರುವ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡುವ ಮೂಲಕ ವಿಷ ಜಂತುಗಳು ಶಾಲಾ ಕೊಠಡಿಯೊಳಗೆ ಬರುವುದನ್ನು ತಪ್ಪಿಸಲಿ.