ಮೈಸೂರು: ಕೊಡಗಿನ ಪೊನ್ನಂಪೇಟೆಯ ಸಮೀಪದ ಕಾಫಿ ಎಸ್ಟೇಟ್ ನಲ್ಲಿ ಉರುಳಿಗೆ ಸಿಲುಕ್ಕಿ ಗಂಭೀರವಾಗಿ ಗಾಯಗೊಂಡಿದ್ದ ಗಂಡು ಹುಲಿ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಕೂರ್ಗಳ್ಳಿಯಲ್ಲರುವ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಮೃತಪಟ್ಟಿದೆ.
ಜನವರಿ 17 ರ ರಾತ್ರಿ ಹಂದಿ ಹಿಡಿಯಲು ಹಾಕಿದ ಉರುಳಿಗೆ ಹುಲಿ ಸಿಕ್ಕಿಹಾಕಿಕೊಂಡಿದ್ದು, ಎರಡು ದಿನಗಳ ಕಾಲ ಆಹಾರ ಇಲ್ಲದೆ ನರಳಾಡಿದೆ. ಕೊನೆಗೆ ಅರಣ್ಯ ಇಲಾಖೆಯವರು ಆಗಮಿಸಿದ 18ರ ಬುಧವಾರ ಸಂಜೆ ಸ್ಥಳಕ್ಕೆ ಧಾವಿಸಿ ಹುಲಿಗೆ ಅರವಳಿಕೆ ಮದ್ದು ನೀಡಿ ಸೆರೆಹಿಡುದು, ಮೈಸೂರಿನ ಕೂರ್ಗಳ್ಳಿಯಲ್ಲಿರುವ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿತು.
ಉರುಳಿಗೆ ಸಿಲುಕಿಕೊಂಡ ಪರಿಣಾಮ ಹುಲಿಯ ಮುಂದಿನ ಕಾಲು, ಕೊಳೆತ ಸ್ಥಿತಿಯಲ್ಲಿ ಇದ್ದ ಕಾರಣ ಆ ಭಾಗಕ್ಕೆ ಚಿಕಿತ್ಸೆ ನೀಡಲಾಗುತ್ತಿತು. ಒಂದು ದಿನ ಚಿಕಿತ್ಸೆಗೆ ಸ್ಪಂದಿಸಿದ ಹುಲಿ ನಿನ್ನೆ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದೆ ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಹಕ ನಿರ್ಧೇಶಕಿ ಕಮಲಾ ಕರಿಕಳಾನ್ ತಿಳಿಸಿದ್ದಾರೆ.
ಇಂದು ಸತ್ತ ಹುಲಿಯ ಮರಣೋತ್ತರ ಪರೀಕ್ಷೆಯನ್ನ ನಡೆಸಿದ ವೈದ್ಯರು ಅದರ ಮಾದರಿಗಳನ್ನ ಬೆಂಗಳೂರಿನ ಲ್ಯಾಬ್ಗೆ ಕಳುಹಿಸಲಾಗಿದೆ, ವರದಿ ಬಂದ ನಂತರ ನಿಜವಾದ ಕಾರಣ ತಿಳಿಯಬಹುದಾಗಿದೆ ಎಂದು ವೈದ್ಯರು ಸ್ಪಷ್ಟ ಪಡಿಸಿದ್ದಾರೆ.