ತಿ.ನರಸೀಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ವತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಕೃಷಿ ಉತ್ಸವ ಕಾರ್ಯಕ್ರಮ ಎರಡನೇ ದಿನವಾದ ಭಾನುವಾರ ಗ್ರಾಮೀಣ ಭಾಗದ ರೈತರು, ರೈತ ಮಹಿಳೆಯರು ಬಾರದೆ ಕಳೆಗುಂದಿದಂತೆ ಕಂಡು ಬಂತು.
ಮೊದಲ ದಿನವಾದ ಶನಿವಾರ ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರಹೆಗ್ಡೆರವರ ಆಗಮನದಿಂದಾಗಿ ತಾಲೂಕಿನಿಂದ 10 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೈತ ಮಹಿಳೆಯರು ಹಾಗೂ ಸ್ವಸಹಾಯ ಸಂಘದ ಸದಸ್ಯರು ಆಗಮಿಸಿದ್ದರಿಂದ ಯಶಸ್ಸು ಕಂಡಿತ್ತು.
ಎರಡನೇ ದಿನವಾದ ಭಾನುವಾರ ಗ್ರಾಮೀಣ ಭಾಗದ ರೈತರಾಗಲಿ, ಮಹಿಳೆಯರಾಗಲಿ ಇತ್ತ ಸುಳಿಯಲಿಲ್ಲ. ಕೆಲ ಸ್ವಸಹಾಯ ಸಂಘದ ಮಹಿಳೆಯರು ತಮ್ಮ ಮಕ್ಕಳ ಜೊತೆ ಆಗಮಿಸಿ ಕೃಷಿ ಉತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೋಡಿ, ಕೆಲ ಗೃಹಪಯೋಗಿ ಸಾಮಗ್ರಿಗಳನ್ನು ಖರೀದಿಸಿ ಮನೆಯತ್ತ ಹೆಜ್ಜೆ ಹಾಕಿದರು. ಆದರೆ ಕೃಷಿ ಉತ್ಸವ ಸ್ಥಳದಲ್ಲಿ ಹೆಚ್ಚಿನ ಜನರಿಲ್ಲದ ಕಾರಣ ವಸ್ತು ಪ್ರದರ್ಶನ ಕಳೆಗುಂದಿದ್ದು, ವೇದಿಕೆ ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಕುರ್ಚಿಗಳು ಖಾಲಿ ಖಾಲಿಯಾಗಿದ್ದವು.
ಈ ಮಧ್ಯೆ ಜನರಿಲ್ಲದಿದ್ದರೂ ಕೂಡ ಕೃಷಿ ಉತ್ಸವದಲ್ಲಿ ಬೆಳಿಗ್ಗೆ 12 ರಿಂದ 2 ಗಂಟೆಯವರಗೆ ಧಾರಣೆ ಕುಸಿತಕ್ಕೆ ಮಿಶ್ರಬೇಸಾಯ ಪರಿಹಾರವೇ? ಮತ್ತು ಕೃಷಿಯಲ್ಲಿ ಖರ್ಚು ವೆಚ್ಚಗಳ ನಿಯಂತ್ರಣ ಹಾಗೂ ಯಂತ್ರೋಪಕರಣಗಳ ಬಳಕೆ ವಿಚಾರ ಕುರಿತು ಕೊಳ್ಳೇಗಾಲ ಕೃಷಿ ಅಧಿಕಾರಿ ರಘುರಾಜ್ ಹಾಗೂ ಮಧ್ಯಾಹ್ನ 2 ರಿಂದ 3.30 ಗಂಟೆಯವರೆಗೆ ಸುಧಾರಿತ ಭತ್ತ ಕಬ್ಬು ಬೇಸಾಯ ವಿಧಾನ ಹಾಗೂ ಪ್ರಯೋಜನ ನಂಜನಗೂಡು ಕೃಷಿ ಅಧಿಕಾರಿ ಚಂದ್ರಪ್ರಭ ವಿಚಾರ ಸಂಕಿರಣ ನಡೆಸಿಕೊಟ್ಟರು.