ಮೈಸೂರು: ತಮಿಳುನಾಡಿನಲ್ಲಿ ಒಗ್ಗಟ್ಟಿನಲ್ಲಿ ಬಲವಿರುವುದರಿಂದ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಲ್ಲಿಕಟ್ಟಿಗೆ ಅವಕಾಶ ನೀಡಿದೆ. ರಾಜ್ಯದಲ್ಲಿ ಒಗ್ಗಟ್ಟು ಬರಬೇಕಾದರೆ ಪ್ರಾದೇಶಿಕ ಪಕ್ಷಗಳ ಅಧಿಕಾರ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಭಾನುವಾರ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಜೆಡಿಎಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದಲ್ಲಿ ಆಡಳಿತ ಸಹಕಾರ ಸಿಗುತ್ತಿಲ್ಲ. ಅಲ್ಲದೇ ಒಗ್ಗಟ್ಟಿನ ಬಲ ಕುಂಟುತ್ತಿದೆ. ಕಾಂಗ್ರೆಸ್ ಮುಖಂಡ ಸಿ.ಎಂ.ಇಬ್ರಾಹಿಂ ಜೆಡಿಎಸ್ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವುದು ಕಷ್ಟ. ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಚರ್ಚಿಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಇನ್ನು ಕಳಲೆ ಕೇಶವ ಮೂರ್ತಿ ನಡೆಯ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷಕ್ಕಿಂತ ಯಾರು ದೊಡ್ಡವರಲ್ಲ. ಪಕ್ಷದ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ತೀರ್ಪನ್ನು ಶೀಘ್ರದಲ್ಲಿ ಪ್ರಕಟಿಸುತ್ತೇವೆ ಎಂದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಟಾರ್ಗೆಟ್ 130 ಗುರಿ ಇರುವುದರಿಂದ ಜನ ಬೆಂಬಲಿತ ವ್ಯಕ್ತಿಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುವುದು. ಮೊದಲ ಹಂತದಲ್ಲಿ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ನಂತರ ಎರಡನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಜಲ್ಲಿಕಟ್ಟುಗೆ ಅನುಮತಿ ನೀಡಿ ಎರಡು ಅಮಾಯಕ ಜೀವಗಳನ್ನ ಕೇಂದ್ರ ಸರ್ಕಾರ ಬಲಿ ಪಡೆದಿದೆ. ಮಹದಾಯಿ ಹೋರಾಟದಂತೆ ನಮ್ಮ ಚಿತ್ರ ತಾರೆಯರು ಕಂಬಳ ಹೋರಾಟದಲ್ಲಿ ತೊಡಗಿಕೊಳ್ಳಬೇಕಿದೆ ಎಂದು ತಿಳಿಸಿದರು.
ಹೆಚ್ಡಿಕೆಗೆ ಘೇರಾವ್ ಹಾಕಿದ ಕಾರ್ಯಕರ್ತರು: ಜೆಡಿಎಸ್ ನಗರಾಧ್ಯಕ್ಷ ಹರೀಶ್ ಗೌಡರಿಗೆ ಅವರ ಅಭಿಮಾನಿಗಳು ಜೈಕಾರ ಕೂಗುತ್ತ, ಚಾಮರಾಜ ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ಗಲಾಟೆ ಮಾಡಿದ್ದಲ್ಲದೆ ಘೇರಾವ್ ಹಾಕಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸಿಟ್ಟಿಗೆದ್ದ ಕುಮಾರಸ್ವಾಮಿ ಕಾರ್ಯಕರ್ತರನ್ನು ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡರು.
ಇದೇ ರೀತಿ ವರ್ತನೆ ಮುಂದುವರೆದರೆ ಪಕ್ಷದಿಂದ ಉಚ್ಛಾಟಿಸುತ್ತೇನೆ ಎಂದು ಗದರಿದರು. ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಹರೀಶ್ ಗೌಡರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದರು. ಇದರಿಂದ ಕುಮಾರಸ್ವಾಮಿ ಕುಪಿತರಾಗಿ, ಕೂಗುವುದನ್ನು ನಿಲ್ಲಿಸಲು ಹೇಳಿ. ಇಲ್ಲವಾದರೆ ನಿನ್ನನ್ನು ಅಧ್ಯಕ್ಷ ಗಾದಿಯಿಂದಲೇ ವಜಾ ಮಾಡುತ್ತೇನೆ ಎಂದು ಗದರಿದರು.
ಸಭೆಯಲ್ಲಿ ಶಾಸಕರಾದ ಸಾರಾ ಮಹೇಶ್, ಜಿ.ಟಿ.ದೇವೇಗೌಡ, ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಮೇಯರ್ ಎಂ.ಜೆ.ರವಿಕುಮಾರ್, ಮಾಜಿ ಮೇಯರ್ಗಳಾದ ಸಂದೇಶ್ ಸ್ವಾಮಿ, ಆರ್.ಲಿಂಗಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಜೆಡಿಎಸ್ ಪಕ್ಷ ನಿಷ್ಠೆಗೆ ಬದ್ಧ: ಪಕ್ಷದ ವರಿಷ್ಠರು ಹಾಗೂ ಮುಖಂಡರು ತೋರುವ ದಾರಿಯಲ್ಲಿ ಸಾಗುತ್ತೇನೆ. ಉಪ ಚುನಾವಣೆಯಲ್ಲಿ ನಿಲ್ಲಬೇಕೊ ಬೇಡವೊ ಎಂಬುದನ್ನು ವರಿಷ್ಠರಿಗೆ ತಿಳಿಸಿದ್ದು, ಪಕ್ಷದ ನಿಷ್ಠೆಗೆ ಬದ್ಧನಾಗಿದ್ದೇನೆಂದು ನಂಜನಗೂಡಿನ ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ ತಿಳಿಸಿದರು. ಕಳೆದ 10 ದಿನಗಳಿಂದ ತಮ್ಮನ್ನು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯೆಂದು ಬಿಂಬಿಸಲಾಗುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ನಾನು ಪಕ್ಷ ತೊರೆಯುವುದಿಲ್ಲ. ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಈಗಾಗಲೇ ಜೆಡಿಎಸ್ ವರಿಷ್ಠ ಹಾಗೂ ರಾಜ್ಯಾಧ್ಯಕ್ಷರಿಗೆ ತಿಳಿಸಿದ್ದೇನೆ. ಅವರ ಮಾರ್ಗದರ್ಶನದಂತೆಯೇ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.